ಹೊನ್ನಾಳಿ : ಮನುಷ್ಯನಿಗೆ ಗಾಳಿ,ಬೆಳಕು ಎಷ್ಟು ಮುಖ್ಯವೋ ಅದೇ ರೀತಿ ನೀರೂ ಕೂಡ ಅತ್ಯಮೂಲ್ಯವಾದದ್ದು, ಅದನ್ನು ಸಂರಕ್ಷಿಸ ಬೇಕಾಗಿರುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಅಬರಗಟ್ಟೆ ಗ್ರಾಮದ ಕೆರೆಗೆ ಬಾಗಿಣ ಅರ್ಪಿಸಿ ಮಾತನಾಡಿದ ಶಾಸಕರು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಜಲಕ್ರಾಂತಿ ಮಾಡುವ ನಿಟ್ಟಿನಲ್ಲಿ ಅವಳಿ ತಾಲೂಕಿನ ಪ್ರತಿಯೊಂದು ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಅರಬಗಟ್ಟೆಯ ಕೆರೆಯನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತಿದ್ದು ಇದೀಗ ಕೆರೆಯ ತುಂಬೆಲ್ಲಾ ನೀರು ಸಂಗ್ರಹವಾಗಲು ಅನುಕೂಲವಾಗಿದೆ ಎಂದರು.
ಕೆರೆ ಬರ್ತಿಯಾದ ಹಿನ್ನೆಲೆಯಲ್ಲಿ ಇದೀಗ ಸುತ್ತಮುತ್ತಲ ಕೊಳವೆ ಬಾವಿಗಳಿಗೂ ಅನುಕೂಲವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಎಂದರು.
ಇದೀಗ 518 ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ದೊರೆತಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಕೆರೆಗಳನ್ನು ತುಂಬಿಸುವ ಯೋಜನೆಯ ಜೊತೆಗೆ ಕೆರೆಗಳ ಅಭಿವೃದ್ದಿಗೂ 70 ಕೋಟಿ ಹಣ ಮೀಸಲಿಡಲಾಗಿದೆ ಎಂದ ರೇಣುಕಾಚಾರ್ಯ ಸದ್ಯದರಲ್ಲೇ ಟೆಂಡರ್ ಆಗಲಿದೆ ಎಂದರು.
ಈಗಾಗಲೇ ಅರಬಗಟ್ಟೆ ಗ್ರಾಮದಲ್ಲಿ ಪಿಯು ಕಾಲೇಜು,ಶಾಲಾ ಕಟ್ಟಡಗಳು, ಅಂಬೇಡ್ಕರ್ ಭವನ, ಸಿಸಿ ರಸ್ತೆಗಳು ಸೇರಿದಂತೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಗ್ರಾಮವನ್ನು ಅಭಿವೃದ್ದಿ ಮಾಡಿದ್ದೇನೆ ಎಂದರು.
ಅವಳಿ ತಾಲೂಕಿನ ಅಭಿವೃದ್ದಿಯೇ ನನ್ನ ಮೂಲ ಮಂತ್ರ ಎಂದ ರೇಣುಕಾಚಾರ್ಯ ಈಗಾಗಲೇ ಸಾವಿರಾರು ಕೋಟಿ ಅನುದಾನವನ್ನು ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದು, ಅವಳಿ ತಾಲೂಕನ್ನು ಮಾದರಿ ತಾಲೂಕು ಮಾಡಲು ಪಣ ತೊಟ್ಟಿದ್ದೇನೆಂದ ರೇಣುಕಾಚಾರ್ಯ ಅಭಿವೃದ್ದಿ ಮಾಡುವವರನ್ನು ಬೆಂಬಲಿಸಿ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು..

Leave a Reply

Your email address will not be published. Required fields are marked *