ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಕಳೆದ ವರ್ಷ ಕೋವಿಡ್ ನಿಂದ ಮೃತಪಟ್ಟವರ 37 ಕುಟುಂಬದವರಿಗೆ ತಲಾ ಒಂದು ಲಕ್ಷದಂತೆ ಒಟ್ಟು 37 ಲಕ್ಷ ಪರಿಹಾರ ನೀಡಲಾಗಿದೆ. ಈ ಹಣವನ್ನು ಆರ್ಟಿಜಿಎಸ್ ಮೂಲಕ ಅವರ ವಾರಸುದಾರರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶನಿವಾರ ಪುರಸಭಾ ಆವರಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ -10 ಸೋಂಕಿನಿಂದ ಮೃತಪಟ್ಟವರ ಕುಟುಂಬಗಳ ವಾರಸುದಾರರಿಗೆ, ಅತಿವೃಷ್ಠಿಯಿಂದ ಹಾನಿಗೊಳಗಾದ ಮನೆಗಳಿಗೆ ಹಾಗೂ ಭೋವಿ ಅಭಿವೃದ್ಧಿ ನಿಗಮದಿಂದ 120 ಜನರಿಗೆ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ಪರಿಹಾರದ ಚೆಕ್ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಅತಿವೃಷ್ಠಿಯಿಂದ ಹಾನಿಗೊಳಗಾದ ಮನೆಗಳ ವಾರಸುದಾರರಿಗೆ ” ಎ ” ಕೆಟಗರಿಯ 72 ಮನೆಗಳಿಗೆ ತಲಾ 5 ಲಕ್ಷ, ” ಬಿ ” ಕೆಟಗರಿಯ ಸುಮಾರು 142 ಜನರಿಗೆ 3 ಲಕ್ಷ ಹಾಗೂ ” ಸಿ ” ಕೆಟಗರಿಯ 180 ಮನೆಗಳಿಗೆ 50 ಸಾವಿರದಂತೆ ಪರಿಹಾರವನ್ನು ನೇರವಾಗಿ ಅವರ ಖಾತೆಗಳಿಗೆ ನೀಡಲಾಗಿದೆ ಎಂದ ಅವರು ಈ ಎಲ್ಲಾರಿಗೂ ನಾನು ನನ್ನ ವೈಯಕ್ತಿಕವಾಗಿ 1 ಸಾವಿರ ಸಹಾಯವನ್ನು ನೀಡಿದ್ದೇನೆ ಎಂದು ಹೇಳಿದರು.
ಕೋವಿಡ್ ಸೇವೆಯಲ್ಲಿ ಮೃತಪಟ್ಟ ಮಹಿಳೆಗೆ 30 ಲಕ್ಷ ಪರಿಹಾರ : ತಾಲ್ಲೂಕಿನ ಸಾಸ್ವೇಹಳ್ಳಿ ಹೋಬಳಿಯ ಐನೂರು ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಿ.ಎಸ್. ಚಂದ್ರಮ್ಮ ಕೃಷ್ಣಪ್ಪ ಅವರು ಕೋವಿಡ್ ಸೋಂಕು ನಿಯಂತ್ರಣ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರು ಕೋವಿಡ್ ಸೋಂಕಿನಿಂದ ತುತ್ತಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ 2021 ರ ಆಗಸ್ಟ್ ನಲ್ಲಿ ಮೃತಪಟ್ಟರು. ಹೀಗಾಗಿ ಸರ್ಕಾರದ ಆದೇಶದಂತೆ ಅವರ ವಾರಸುದಾರ ಮಗನಾದ ಶಿವರಾಜ್ ಅವರಿಗೆ 30 ಲಕ್ಷ ಮರಣ ಪರಿಹಾರವನ್ನು ನೀಡಿದೆ ಎಂದು ರೇಣುಕಾಚಾರ್ಯ ಹೇಳಿದರು.
ಭೋವಿ ನಿಗಮದಿಂದ 50 ಸಾವಿರ ಸಹಾಯಧನ : ರಾಜ್ಯ ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 120 ಜನರಿಗೆ ತಲಾ 50 ಸಾವಿರದಂತೆ ಧನ ಸಹಾಯ ವಿತರಿಸಲಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ವೈಯಕ್ತಿಕ ಪರಿಹಾರ ; ಕರೋನಾದಿಂದ ಮೃತಪಟ್ಟ 348 ಜನರ ಕುಟುಂಬದವರಿಗೆ ತಲಾ 10 ಸಾವಿರ ಹಾಗೂ ಸಿ ಕೆಟಗೆರೆಯಲ್ಲಿ ಮನೆ ಕಳೆದುಕೊಂಡವರಿಗೆ ತಲಾ ಒಂದು ಸಾವಿರ ದಂತೆ 175 ಜನರಿಗೆ ಪರಿಹಾರ ನಿಡಿದ್ದೇನೆ. ಎಂದರು.
ನನ್ನಂತ ಸಾಮನ್ಯ ವ್ಯಕ್ತಿಯನ್ನು ಮೂರು ಬಾರಿ ಶಾಸಕನ್ನಾಗಿ ಆಯ್ಕೆ ಮಾಡಿದ್ದಿರಿ,ನಾಣು ನಿಮ್ಮ ಋಣ ತೀರಿಸಲಿಕ್ಕೆ ನಾಣು ಸದಾ ಸಿದ್ದನಿದ್ದೇನೆ ಈಗಾಗಲೆ ಅವಳಿ ತಾಲೂಕಿನಾಧ್ಯಂತ ಸಾವಿಋಆರು ಕೊಟಿ ವೆಚ್ಚದಲ್ಲಿ ಅಭಿವೃಧ್ಧಿ ಮಾಡಿಸಿದ್ದೇನೆ,ಇನ್ನೂ ಅಭಿವೃಧ್ಧಿ ಮಾಡುವ ಹಸಿವು ನನಗಿದೆ, ಹೊನ್ನಾಳಿಯನ್ನು ಇಡೀ ರಾಜ್ಯದಲ್ಲಿ ಮಾದರಿ ತಾಲೂಕಾಗಿ ಮಾಡುವುದೇ ನನ್ನ ಗುರಿ ಎಂದರು.
ಬ್ಲಾಕ್ಮೇಲ್ ಸಂಘಟನೆಗಳಿಗೆ ಹೆದರಬೇಡಿ : ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಕೇಂದ್ರಗಳಲ್ಲಿ ಇತ್ತೀಚೆಗೆ ಹಲವು ಸಂಘಟನೆಗಳು ಸರ್ಕಾರದ ಇಲಾಖೆಗಳಿಗೆ ಹೋಗಿ ಆರ್ಟಿಐ ಮೂಲಕ ಅರ್ಜಿ ಸಲ್ಲಿಸಿ ನಂತರ ಬ್ಲಾಕ್ಮೇಲ್ ದಂಧೆಗೆ ಇಳಿದಿವೆ. ಅಧಿಕಾರಿಗಳು ಒಳ್ಳೇಯ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಾಗಿಲ್ಲ. ಕೇವಲ ಅರ್ಜಿ ಹಾಕಿ ಸುಲಿಗೆ ಕೆಲಸಕ್ಕೆ ಇಳಿದಿರುವುದು ನಾಚಿಕೆಗೇಡಿನ ಕೆಲಸ. ಇಂಥವರು ನನ್ನ ವಿರುದ್ಧ ಪ್ರತಿಭಟನೆ ಮಾಡಿದರೂ ನಾನು ಹೆದರುವುದಿಲ್ಲ ಎಂದು ನೇರ ವಾಗ್ದಾಳಿ ಮಾಡಿದರು.
ಹಿರೇಮಠ ಕೆರೆ ಅಭಿವೃದ್ಧಿಗೆ 14 ಲಕ್ಷ : ನಗರದ ಸಮೀಪವಿರುವ ಹಿರೇಮಠದ ಕೆರೆ ಅಭಿವೃದ್ಧಿಗೆ 14 ಲಕ್ಷ ವೆಚ್ಚದಲ್ಲಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಮಾದನಬಾವಿ ಸಮೀಪದಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದರು.
ತನಿಖೆ ಮಾಡಿಸಲಿ : ಇತ್ತೀಚೆಗೆ ಯಾರೋ ಶಾಸಕ ರೇಣುಕಾಚಾರ್ಯ ಅವರ ತಮ್ಮಂದಿರು ಗಂಗಾ ಕಲ್ಯಾಣ ಯೋಜನೆಯಡಿ ಕೆಲಸ ಮಾಡಿಕೊಡಲು ಹಣ ಪಡೆದಿದ್ದಾರೆ ಎಂದು ವಾಟ್ಸಪ್ ನಲ್ಲಿ ಸುದ್ದಿ ಹರಿಬಿಟ್ಟಿದ್ದಾರೆ. ಆದರೆ ಇದು ಸುಳ್ಳು, ಇದು ಇಲಾಖೆಯಲ್ಲಿನ ಅಡ್ಜಸ್ಟ್ಮೆಂಟ್ ಹಣ, ಇದು ಭ್ರಷ್ಟಾಚಾರಕ್ಕಾಗಿ ಪಡೆದ ಹಣವಲ್ಲ. ಯಾರಾದರೂ ಇದ್ದರೆ ಇಲ್ಲಿಯೇ ಬಂದು ನನ್ನನ್ನು ಪ್ರಶ್ನೆ ಮಾಡಬಹುದು ಎಂದು ನೇರವಾಗಿ ಸವಾಲು ಹಾಕಿದರು.
ಕೋವಿಡ್ ನಲ್ಲಿ ಭ್ರಷ್ಟಾಚಾರ ಮಾಡುವಷ್ಟು ಕೀಳು ಮಟ್ಟದ ರಾಜಕಾರಣಿ ನಾನಲ್ಲ. ಕೆಲವರು ನಾನು ಮಾಸ್ಕ್ ವಿತರಣೆಯಲ್ಲಿ, ಕೋವಿಡ್ ವಿಚಾರದಲ್ಲಿ ಲಕ್ಷಾಂತರ ಹಣ ಕೊಳ್ಳೆ ಹೊಡೆದಿದ್ದೇನೆ ಎಂದು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಾಬೀತುಪಡಿಸಿದರೆ ನಾನು ನಾಲಿಗೆ ಸೀಳಿಕೊಳ್ಳುತ್ತೇನೆ ಎಂದು ವೇದಿಕೆಯ ಮೇಲೆ ಹೇಳಿದರು.
ನಾನು ಕೋವಿಡ್ ಸಂದರ್ಭದಲ್ಲಿ 70 ಆಮ್ಲಜನಕ ಸಾಂದ್ರಕಗಳನ್ನು ತಂದು ಜನರ ಜೀವ ಉಳಿಸುವ ಕೆಲಸ ಮಾಡಿದ್ದೇನೆ. ನೂರಾರು ಆಮ್ಲಜನಕ ಘಟಕಗಳನ್ನು ತಂದಿದ್ದೇನೆ. ಆಮ್ಲಜನಕ ಉತ್ಪಾದನ ಘಟಕ ನಿರ್ಮಾಣ ಮಾಡಿದ್ದೇನೆ. 3 ಆಂಬ್ಯುಲೆನ್ಸ್ ಗಳನ್ನು ತಂದಿದ್ದೇನೆ. ಇಂತಹ ನೂರಾರು ಕೆಲಸ ಮಾಡಿದ್ದೇನೆ. ನನ್ನ ವೈಯಕ್ತಿಕವಾಗಿ ಊಟ, ತಿಂಡಿ ಕೊಟ್ಟಿದ್ದೇನೆ. ಇದಕ್ಕೆ ನನ್ನ ಇಡೀ ಕುಟುಂಬ ಸಹಕಾರ ನೀಡಿದೆ. ಆದರೂ ಕೆಲವರು ನನ್ನನ್ನು ಟೀಕೆ ಮಾಡುತ್ತಾರೆ. ಇದಕ್ಕೆ ನಾನು ಹೆದರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸನಗೌಡ ಕೋಟೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ತಾ.ಪಂ. ಇಒ ರಾಮಭೋವಿ, ಪುರಸಭಾ ಮುಖ್ಯಾಧಿಕಾರಿ ಪಂಪಾಪತಿನಾಯ್ಕ, ಸಿಡಿಪಿಒ ಮಹಾಂತೇಶ್ ಪೂಜಾರ್, ರಾಜ್ಯ ಭೋವಿ ನಿಗಮದ ನಿರ್ದೇಶಕ ಅಜೇಯ್ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.