ದಾವಣಗೆರೆ ಜ.05
ಕೋವಿಡ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ
ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕೆ ಸರ್ಕಾರ
ಮಾರ್ಗಸೂಚಿ ಪ್ರಕಟಿಸಿದ್ದು, ಇದರನ್ವಯ ಜಿಲ್ಲೆಯಲ್ಲಿಯೂ
ವಾರಾಂತ್ಯ ಕಫ್ರ್ಯೂ, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್
ಮುಂತಾದೆಡೆ ಶೇ. 50 ಆಸನ ಸಾಮಥ್ರ್ಯದೊಂದಿಗೆ ಕೋವಿಡ್
ನಿಯಂತ್ರಣ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು
ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ಮಾರ್ಗಸೂಚಿಯನ್ನು ತಪ್ಪದೆ ಪಾಲಿಸುವುದರ
ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು
ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.
ಜಿಲ್ಲಾಡಳಿತ ಭವನದಲ್ಲಿನ ಕಚೇರಿ ಸಭಾಂಗಣದಲ್ಲಿ ಬುಧವಾರ
ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಕಾಏಕಿ
ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ,
ಕೋವಿಡ್ ನಿಯಂತ್ರಣಕ್ಕಾಗಿ ಹಲವು ಮುಂಜಾಗ್ರತಾ
ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ
ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ನೂತನ
ಮಾರ್ಗಸೂಚಿಯು ಜ. 05 ಬುಧವಾರ ರಾತ್ರಿ 10 ರಿಂದ ಜ. 19 ರ ಬೆಳಿಗ್ಗೆ 05
ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪ್ರತಿದಿನ ರಾತ್ರಿ 10
ಗಂಟೆಯಿಂದ ಬೆಳಿಗ್ಗೆ 05 ಗಂಟೆಯವರೆಗೆ ರಾತ್ರಿ ಕಫ್ರ್ಯೂ
ಜಾರಿಗೊಳಿಸಲಾಗಿದೆ ಕಫ್ರ್ಯೂ ಅವಧಿಯಲ್ಲಿ ರೋಗಿಗಳಿಗೆ ಆಸ್ಪತ್ರೆಗೆ
ದಾಖಲಿಸುವುದು ಅಲ್ಲದೆ ತುರ್ತು ಸೇವೆಯ ಚಟುವಟಿಕೆ ಹೊರತುಪಡಿಸಿ,
ಉಳಿದಂತೆ ಎಲ್ಲ ಬಗೆಯ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಎಲ್ಲ
ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದ 05
ದಿನ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೋವಿಡ್
ನಿಯಂತ್ರಣ ಮಾರ್ಗಸೂಚಿಯಂತೆ ಜಾರಿಯಲ್ಲಿರುತ್ತದೆ. ಪಬ್ಸ್, ಕ್ಲಬ್ಸ್,
ರೆಸ್ಟೋರೆಂಟ್ಸ್, ಬಾರ್ಸ್, ಹೋಟೆಲ್ ಗಳು, ಚಿತ್ರಮಂದಿರಗಳು,
ಮಲ್ಟಿಪ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂ, ಈಜುಕೊಳ,
ಜಿಮ್, ಕ್ರೀಡಾ ಕಾಂಪ್ಲೆಕ್ಸ್ ಇತ್ಯಾದಿ ಸ್ಥಳಗಳಲ್ಲಿಯೂ ಕೂಡ ಆಸನ
ಸಾಮಥ್ರ್ಯದ ಶೇ. 50 ರಷ್ಟು ಮಾತ್ರ ಕಾರ್ಯಚಟುವಟಿಕೆಯನ್ನು
ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು
ಕೈಗೊಳ್ಳಬೇಕು. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ
ಯಾವುದೇ ರಿಯಾಯಿತಿ ನೀಡಲು ಜಿಲ್ಲಾಡಳಿತಕ್ಕೆ ಅವಕಾಶ
ಇರುವುದಿಲ್ಲ, ಆದರೆ ಅಗತ್ಯವಿದ್ದರೆ ಇನ್ನಷ್ಟು ನಿರ್ಬಂಧ ಹೇರಲು
ಅವಕಾಶಗಳಿವೆ ಎಂದರು.
ಕೈಗಾರಿಕೆ, ಕಂಪನಿಗಳ ವ್ಯಕ್ತಿಗಳ ಅಗತ್ಯ ಚಟುವಟಿಕೆಗಳಿಗಾಗಿ
ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ, ಇಂತಹವರು ಅಧಿಕೃತ
ಗುರುತಿನ ಚೀಟಿ ತೋರಿಸಬೇಕಾಗುತ್ತದೆ. ಟೆಲಿಕಾಂ, ಇಂಟರ್‍ನೆಟ್ ಸೇವೆ
ಪೂರೈಕೆದಾರರು, ತುರ್ತು ಸೇವೆಗೆ ಸಂಬಂಧಿಸಿದ ವಾಹನ ಹಾಗೂ
ಸಿಬ್ಬಂದಿ ಗುರುತಿನ ಕಾರ್ಡ್ ತೋರಿಸಬೇಕು. ವೈದ್ಯಕೀಯ, ಔಷಧಿ
ಸೇವೆ ಸಂಬಂಧಪಟ್ಟವರಿಗೆ ನಿರ್ಬಂಧ ಇರುವುದಿಲ್ಲ. ಸರಕು ಸಾಗಾಣಿಕೆ
ಸಾಗಿಸುವ ವಾಹನ, ಟ್ರಕ್, ಗೃಹ ಪೂರೈಕೆ ವಾಹನಗಳು, ಇ-ಕಾಮರ್ಸ್
ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ
ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ, ಆದರೆ
ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್ ಹೊಂದಿರಬೇಕು.
ಇವುಗಳನ್ನು ಹೊರತುಪಡಿಸಿ ಇತರೆ ಎಲ್ಲ ಬಗೆಯ
ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ ಎಂದರು.
ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದ್ದು, ಶುಕ್ರವಾರ ರಾತ್ರಿ 08
ಗಂಟೆಯಿಂದ ಸೋಮವಾರ ಬೆಳಿಗ್ಗೆ 05 ಗಂಟೆಯವರೆಗೆ ಸಂಪೂರ್ಣ
ಕಫ್ರ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ರಾಜ್ಯ, ಕೇಂದ್ರ
ಸರ್ಕಾರಿ ಕಚೇರಿಗಳಲ್ಲಿನ ಹಾಗೂ ಕೋವಿಡ್-19 ಕಂಟೈನ್‍ಮೆಂಟ್
ಮತ್ತು ನಿರ್ವಹಣೆಗೆ, ತುರ್ತು ಸೇವೆಗೆ ಸಂಬಂಧಿಸಿದ ಅಧಿಕಾರಿ,
ಸಿಬ್ಬಂದಿಗಳ ಓಡಾಟಕ್ಕೆ ನಿರ್ಬಂಧ ಇರುವುದಿಲ್ಲ. ಎಲ್ಲ ಸಾರ್ವಜನಿಕ
ಪಾರ್ಕ್‍ಗಳು ಮುಚ್ಚಲಾಗುತ್ತದೆ. ಆಹಾರ ಧಾನ್ಯ, ಆಹಾರ, ಹಣ್ಣು,
ತರಕಾರಿ, ಮಾಂಸ, ಮೀನು, ಹಾಲು ಮತ್ತು ಇತರೆ ಡೈರಿ
ಪದಾರ್ಥಗಳು, ಪಶು ಆಹಾರಕ್ಕೆ ಸಂಬಂಧಿಸಿದ ಅಂಗಡಿಗಳು
ತೆರೆಯಲು ಅವಕಾಶವಿದೆ. ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣುಗಳ
ವ್ಯಾಪಾರಕ್ಕೆ ನಿರ್ಬಂಧ ಇಲ್ಲ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್
ಸೇವೆ ಲಭ್ಯವಿರುತ್ತದೆ. ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಅವಕಾಶ
ಕಲ್ಪಿಸಲಾಗಿದೆ. ಆದರೆ ಬಟ್ಟೆ, ಪಾತ್ರೆ, ಬೆಳ್ಳಿ-ಬಂಗಾರ ದಂತಹ
ಅಂಗಡಿಗಳಿಗೆ ಅವಕಾಶ ಇರುವುದಿಲ್ಲ. ಬಸ್, ರೈಲು, ಸಾರ್ವಜನಿಕ
ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ
ಇರುವುದಿಲ್ಲ, ಆದರೆ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್
ಹೊಂದಿರಬೇಕು. ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು
ಪಾಲಿಸುವುದು ಕಡ್ಡಾಯವಾಗಿರುತ್ತದೆ. ವಾರಾಂತ್ಯ ಕಫ್ರ್ಯೂ
ಜಾರಿಗೊಳಿಸಿರುವುದರಿಂದ, ಶನಿವಾರದಂದು ಶಾಲಾ ಕಾಲೇಜುಗಳು
ಇರುವುದಿಲ್ಲ ಎಂದರು.
ಸಾರ್ವಜನಿಕರು ಅಸಡ್ಡೆಯಿಂದ, ಅನಾವಶ್ಯಕವಾಗಿ ಜನಜಂಗುಳಿ
ಇರುವ ಪ್ರದೇಶಕ್ಕೆ ಹೋಗುವುದು ಬೇಡ. ಜಿಲ್ಲೆಯಲ್ಲಿ ನಿತ್ಯ 2
ರಿಂದ 3 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 03ನೇ
ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ಮತ್ತು
ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 3
ಸಾವಿರದಷ್ಟು ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದು, ಖಾಸಗಿ ಮೆಡಿಕಲ್
ಕಾಲೇಜುಗಳು ಶೇ. 75 ರಷ್ಟು ಹಾಗೂ ಖಾಸಗಿ ಆಸ್ಪತ್ರೆಗಳು ಶೇ.
50 ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ
ಒದಗಿಸುವಂತೆ ಈಗಾಗಲೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ
ವೈದ್ಯಕೀಯ ಆಕ್ಸಿಜನ್ ಪೂರೈಕೆ, ಪ್ರಯೋಗಾಲಯಗಳು,
ವೆಂಟಿಲೇಟರ್ ಮುಂತಾದ ಉಪಕರಣಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿನ ಎಲ್ಲ ಆಕ್ಸಿಜನ್ ಪ್ಲಾಂಟ್ ನಿರ್ವಹಣೆಗಾಗಿ 11 ಜನ
ತಂತ್ರಜ್ಞರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಅಂತಿಮಗೊಂಡಿದೆ.
ಇವೆಲ್ಲವನ್ನೂ ಖಾತ್ರಿ ಪಡಿಸಲು ಡಿಹೆಚ್‍ಒ ಅಧಿಕಾರಿ ಒಳಗೊಂಡ 5 ಜನರ
ತಂಡವನ್ನು ನೇಮಿಸಿದ್ದು, ಶನಿವಾರದೊಳಗೆ ವರದಿ ಸಲ್ಲಿಸುವಂತೆ
ಸೂಚನೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ
ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರದ ಸೂಚನೆಯಂತೆ
ಬೂಸ್ಟರ್ ಡೋಸ್ ಲಸಿಕೆ ನೀಡಿಕೆ ಕಾರ್ಯ ಜ. 10 ರಿಂದ ಜಿಲ್ಲೆಯಲ್ಲಿ
ಆರಂಭವಾಗಲಿದೆ. ಒಮಿಕ್ರಾನ್ ಪತ್ತೆಗೆ ಸದ್ಯ ನಾವು ಹಾಸನ ಜಿಲ್ಲೆಗೆ
ಮಾದರಿಯನ್ನು ಕಳುಹಿಸುವ ವ್ಯವಸ್ಥೆ ಇದೆ. ದಾವಣಗೆರೆ
ಜಿಲ್ಲೆಯಲ್ಲಿಯೇ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಆಗುವಂತಾಗಲು,
ವಿಶೇಷ ಪ್ರಯೋಗಾಲಯ ವ್ಯವಸ್ಥೆ ಒದಗಿಸುವಂತೆ ಸರ್ಕಾರಕ್ಕೆ
ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಸರ್ಕಾರದ
ಮಾರ್ಗಸೂಚಿಯಂತೆ ಜ. 19 ರವರೆಗೆ ಜಿಲ್ಲೆಯಲ್ಲಿ ಯಾವುದೇ
ಧರಣಿ, ಪ್ರತಿಭಟನೆ, ರ್ಯಾಲಿ, ಉತ್ಸವ, ಜಾತ್ರೆಗಳಿಗೆ
ಅವಕಾಶವಿರುವುದಿಲ್ಲ. ಮದುವೆಗಳಲ್ಲಿ ಹೊರಾಂಗಣದಲ್ಲಿ ಗರಿಷ್ಠ 200,
ಒಳಾಂಗಣದಲ್ಲಿ ಗರಿಷ್ಠ 100 ಜನ ಮಾತ್ರ ಭಾಗವಹಿಸಲು ಅವಕಾಶವಿದೆ.
ದೇವಾಲಯಗಳಲ್ಲಿಯೂ ಕೂಡ ಕೇವಲ ದರ್ಶನಕ್ಕೆ ಮಾತ್ರ
ಅವಕಾಶವಿದೆ. ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸುವುದು,
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಸಾಕಷ್ಟು ಜಾಗೃತಿ
ಮೂಡಿಸಲಾಗುತ್ತಿದೆ. ಧ್ವನಿವರ್ಧಕಗಳ ಮೂಲಕ ಪ್ರಚಾರ
ಮಾಡಲಾಗುತ್ತಿದೆ. ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ
ದಂಡ ಹಾಕುವಂತೆ ಈಗಾಗಲೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ
ಸೂಚನೆ ನೀಡಲಾಗಿದೆ. ಸಾರ್ವಜನಿಕರು ತಪ್ಪದೆ ಸರ್ಕಾರದ
ಮಾರ್ಗಸೂಚಿಯನ್ನು ಪಾಲಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ
ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.