ಮೈಸೂರು.ಜ.7(ಪಿಎಂ)- ಪಂಚಮಸಾಲಿ ಮುಂದುವರೆದ ಸಮುದಾಯವಾಗಿದ್ದು, ಇದೂ ಸೇರಿದಂತೆ ಯಾವುದೇ ಮುಂದುವರೆದ ಜಾತಿಗಳನ್ನು ‘2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಕೂಡದು ಎಂದು ಹಾಲುಮತ ಮಹಾಸಭಾ ಹಾಗೂ ಹಿಂದುಳಿದ (2ಎ) ವರ್ಗಗಳ ಸಮಿತಿ ಒತ್ತಾಯಿಸಿವೆ. ಮೈಸೂರು ಜಿಲ್ಲಾ ಪ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಯಲ್ಲಿ ಈಗಿರುವ 102 ಜಾತಿಗಳು ಶ್ರಮಿಕ ವರ್ಗಗಳಾಗಿವೆ. ಈಗ ಪಂಚಮಸಾಲಿ ಸಮುದಾಯವನ್ನು ಈ ಪಟ್ಟಿಗೆ ಸೇರ್ಪಡೆ ಮಾಡಿದರೆ ಈ ಶ್ರಮಿಕ ವರ್ಗಗಳಿಗೆ ಅನ್ಯಾಯವಾಗಲಿದೆ. ಆ ಮೂಲಕ ಶ್ರಮಿಕ ವರ್ಗಗಳ ಪಾಲಿಗೆ ಮರಣಶಾಸನ ಬರೆದಂತಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ಆರಂಭಿಸಿದೆ. ಈ ಸಮೀಕ್ಷೆ ಸಂಬಂಧ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ ಆಯೋಗ ಪಂಚಮಸಾಲಿ ಸಮುದಾಯವನ್ನು ‘2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸವ ಬಗ್ಗೆ ಒಲವು ಹೊಂದಿರುವ ಅನುಮಾನವಿದೆ ಎಂದು ದೂರಿದರು. ಆಯೋಗ ನಮ್ಮ ಆಕ್ಷೇಪಣೆಗೆ ಮನ್ನಣೆ ನೀಡದಿದ್ದರೆ ನ್ಯಾಯಾಂಗ ಹೋರಾಟಕ್ಕೂ ಸಿದ್ಧವಿದ್ದೇವೆ. ಅಲ್ಲದೆ, ರಾಜ್ಯಾದ್ಯಂತ 2ಎ ಮೀಸಲಾತಿ ಪಟ್ಟಿಯಲ್ಲಿರುವ 102 ಶ್ರಮಿಕ ವರ್ಗಗಳು ಒಗ್ಗೂಡಿ ಹೋರಾಟ ನಡೆಸಲು ಸಜ್ಜಾಗಲಾಗುತ್ತಿದೆ ಎಂದು ಎಚ್ಚರಿಸಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿಯೂ ಪಂಚಮಸಾಲಿ ಸಮುದಾಯ ಹೆಚ್ಚು ಪ್ರಬಲವಾಗಿದೆ. ಆದರೆ ಕೇವಲ ಶೇ.15ರಷ್ಟು ಮೀಸಲಾತಿ ಹಂಚಿಕೊಳ್ಳುತ್ತಿರುವ 102 ಶ್ರಮಿಕ ವರ್ಗಗಳು ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ದುರ್ಬಲವಾಗಿವೆ. ಪಂಚಮಸಾಲಿ ಸಮುದಾಯ ಆತ್ಮಾವಲೋಕನ ಮಾಡಿಕೊಂಡು 2ಎ ಮೀಸಲಾತಿ ಬೇಡಿಕೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಉಪ್ಪಾರ ಸಮುದಾಯದ ಮುಖಂಡ ಮಹದೇವಶೆಟ್ಟಿ, ಗಾಣಿಗ ಸಮುದಾಯದ ಮುಖಂಡ ಮಹಾದೇವ ಗಾಣಿಗ, ನೇಕಾರ ಸಮುದಾಯದ ಮುಖಂಡ ದಿವಾಕರ್, ಕುಂಬಾರ ಸಮುದಾಯದ ಮುಖಂಡ ಮಾರಶೆಟ್ಟಿ ಗೋಷ್ಠಿಯಲ್ಲಿದ್ದರು.