ಹೊನ್ನಾಳಿ : ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪೋಷಕರಿಗೆ ಕರೆ ನೀಡಿದರು..
ತಾಲೂಕಿನ ವಿವಿಧ ಗ್ರಾಮಗಳಲ್ಲಿ 1 ಕೋಟಿ 90 ಲಕ್ಷ ಮೌಲ್ಯದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಸಿಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ ಎಂದ ರೇಣುಕಾಚಾರ್ಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ಮಂಜೂರು ಮಾಡಿಸಿದ್ದು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗಿದೆ ಎಂದರು.
ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದಾಗಿ ಶಾಲೆಗಳು ಬಂದ್ ಹಾಗಿದ್ದು ಇದೀಗ ಶಾಲೆಗಳು ಮರು ಆರಂಭಗೊಂಡಿದ್ದು ಶಾಲೆಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ರೇಣುಕಾಚಾರ್ಯ ಕಿವಿ ಮಾತು ಹೇಳಿದರಲ್ಲದೇ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ತಾಲೂಕಿನ ಚೀಲಾಪುರ ಗ್ರಾಮದಲ್ಲಿ 8.70 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟಿಸಿದರು. ಬಾಗವಾಡಿ ಗ್ರಾಮದಲ್ಲಿ 10.70 ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ಉದ್ಘಾಟಿಸಿದರು. ಲಿಂಗಾಪುರ ಗ್ರಾಮದಲ್ಲಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ ರೇಣುಕಾಚಾರ್ಯ ಲಿಂಗಾಪುರ ಗ್ರಾಮದಲ್ಲಿ 2 ಕೋಟಿ 10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು. ಅದೇ ರೀತಿ ಹನಗವಾಡಿ ಗ್ರಾಮದಲ್ಲಿ 10.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ಈ ಹಿಂದೆ ಗ್ರಾಮಕ್ಕೆ ಲಕ್ಷಾಂತರ ರೂಪಾಯಿ ಅನುದಾನ ತಂದು ಗ್ರಾಮವನ್ನು ಅಭಿವೃದ್ದಿ ಮಾಡಲಾಗಿದೆ ಎಂದರು.ಅದೇ ರೀತಿ ಐನೂರು ಗ್ರಾಮದಲ್ಲಿ ಐವತ್ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದ ರೇಣುಕಾಚಾರ್ಯ,ಈಗಾಗಲೇ ಐನೂರು ಹೊಸೂರು ಹಾಗೂ ಹಳೇ ಊರಿನಲ್ಲಿ ಐದು ಕೋಟಿಗೂ ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಮಾಡಲಾಗಿದೆ ಎಂದರು. ಹೊಟ್ಯಾಪುರ ಗ್ರಾಮದಲ್ಲಿಯೂ ಪ್ರತಿ ಮನೆಗೂ ನೀರು ಪೂರೈಕೆ ಮಾಡುವ ಜಲಜೀವನ್ ಮೀಷನ್ ಕಾಮಗಾರಿ 12.50 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಪೂರ್ಣಗೊಂಡಿದ್ದು ಇಂದು ಉದ್ಘಾಟನೆ ಮಾಡಿದರು. ಅದೇ ರೀತಿ ತಕ್ಕನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು ಒಟ್ಟು 1.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಗುದ್ದಲಿಪೂಜೆ ನೆರವೇರಿಸಿದರು.
ಅವಳಿ ತಾಲೂಕು ಮಾದರಿ ತಾಲೂಕು ಮಾಡುವ ಗುರಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು ಅವಳಿ ತಾಲೂಕನ್ನು ಮಾದರಿ ತಾಲೂಕು ಮಾಡಲು ಪಣ ತೊಟ್ಟಿದ್ದೇನೆ ಎಂದರು. ಈಗಾಗಲೇ 518 ಕೋಟಿ ವೆಚ್ಚದಲ್ಲಿ ಅವಳಿ ತಾಲೂಕಿನ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಇನ್ನು ಸರ್ಕಾರದಿಂದ ಅನುದಾನ ತಂದು ಅವಳಿ ತಾಲೂಕನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.
ಈ ಸಂದರ್ಭ ಗ್ರಾ.ಪಂ ಸದ್ಯರಾದ ರೇಖಾ, ದೇವುಗೌಡ, ಉಷಾ, ಜ್ಯೋತಿ ಸೇರಿದಂತೆ ಗ್ರಾಮದ ಮುಖಂಡರಾದ ಪ್ರಕಾಶ್, ಉಮೇಶ್, ಮಂಜು,ನಾಗೇಂದ್ರಪ್ಪ,ಪರಶುರಾಂ,ಕಿಟ್ಟಿ,ತಿಪ್ಪೇಶಪ್ಪಗೌಡ್ರು, ತೋಟೇಶಪ್ಪಗೌಡ್ರು ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.