ಹೊನ್ನಾಳಿ : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ನಮ್ಮ ಸರ್ಕಾರ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕಟುಬದ್ದವಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಿಂದ ಹಾಗೂ ಶಾಸಕರ ಅನುದಾನದಲ್ಲಿ 61.50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಶಾಲೆಗಳ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ನಮ್ಮ ಸರ್ಕಾರ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಬದ್ದವಾಗಿದೆ ಎಂದರು.
ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡಿದ್ದು, ಇದರ ಜೊತೆಗೆ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೇ ಎಂದ ಶಾಸಕರು, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನಾನು ಬದ್ದನಾಗಿದ್ದೇನೆ ಎಂದರು.
ಸರ್ಕಾರಿ ಶಾಲೆಯಲ್ಲಿ ಬಿಸಿ ಊಟ ಮಾಡಿದ ಶಾಸಕ : ತಾಲೂಕಿನ ಹನಗವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ರೇಣುಕಾಚಾರ್ಯ ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ಕುಳಿತು ಮದ್ಯಾಹ್ನದ ಬಿಸಿ ಊಟ ಸೇವಿಸಿದರು. ಮಕ್ಕಳೊಂದಿಗೆ ಕುಳಿತ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟ ಪರಿಶೀಲಿಸಿ ಶಾಸಕರು, ಶಾಲೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು.
ಕೊರೊನಾ ಜಾಗೃತಿ ಮೂಡಿಸಿದ ಶಾಸಕರು : ಕೊರೊನಾ ಮೂರನೇ ಅಲೆ ಬರಬಾರದೆಂದು ನಾನು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದ ರೇಣುಕಾಚಾರ್ಯ, ಪ್ರತಿನಿತ್ಯ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದರಲ್ಲದೇ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಎಂದರು.
ವಿವಿಧ ಕಾಮಗಾರಿಗಳ ಉದ್ಘಾಟನೆ : ಕೆಎಸ್‍ಡಿಎಲ್ ನಿಗಮದಿಂದ ಹೊಸಹಳ್ಳಿ 1ನೇ ಕ್ಯಾಂಪ್‍ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರು ಲಕ್ಷ ರೂಪಾಯಿ ವೆಚ್ಚದ ಕಾಂಪೌಂಡ್ ಉದ್ಘಾಟಿಸಿ, ಹುರುಳೆಹಳ್ಳಿ ಗ್ರಾಮದಲ್ಲಿ 5.05 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕಾಪೌಂಡ್ ನಿರ್ಮಾಣ ಸೇರಿದಂತೆ ಅಡಿಗೆ ಮನೆ ದುರಸ್ಥಿ ಕಾಮಗಾರಿ ಉದ್ಘಾಟಿಸಿದರು. ಬಾಗವಾಡಿ ಗ್ರಾಮದಲ್ಲಿ 6.5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕಾಪೌಂಡ್ ನಿರ್ಮಾಣ ಕಾಮಗಾರಿ ಉದ್ಘಾಟಿಸಿ, ಹಗನವಾಡಿ ಗ್ರಾಮದಲ್ಲಿ ಒಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಹಾಗೂ ಕಾಂಪೌಂಡ್ ಕಾಮಗಾರಿ ಉದ್ಘಾಟಿಸಿದರು. ಇನ್ನು ಲಿಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಹಾಗೂ ಪ್ರಾಥಮಿಕ ಶಾಲೆಗೆ ಸುಣ್ಣಬಣ್ಣ ಕಾಮಗಾರಿ ಸೇರಿದಂತೆ ಮಕ್ಕಳಿಗೆ ಡೆಸ್ಕ್ ವಿತರಿಸಲಾಯಿತು. ಹೊಸಹಳ್ಳಿ ಎರಡನೇ ಕ್ಯಾಂಪ್ ನಲ್ಲಿ ಉರ್ದು ಶಾಲೆಯಲ್ಲಿ 5.5. ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಪೌಂಡ್ ಕಾಮಗಾರಿ ಉದ್ಘಾಟಿಸಿದರು. ಇನ್ನು ಹುಣಸಘಟ್ಟ ಗ್ರಾಮದಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಿದ್ದು ಒಟ್ಟು 61.50 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ಕೆಎಸ್‍ಡಿಎಲ್ ನಿದೇರ್ಶಕ ಶಿವು ಹುಡೇದ್, ಬಗರ್ ಹುಕ್ಕುಂ ಕಮಿಟಿ ಸದಸ್ಯರಾದ ಎಂ.ಆರ್.ಮಹಾಂತೇಶ್ ಗ್ರಾ.ಪಂ.ಸದಸ್ಯರಾದ ರಾಜಣ್ಣ, ರಮೇಶ್ ಗ್ರಾಮದ ಮುಖಂಡರಾದ ತಿಪ್ಪೇಶ್ ಬೋವಿ, ಮೊಹಮ್ಮದ್ ಅಲಿ, ಸನಾಹುಲ್ಲಾ, ಸೇರಿದಂತೆ ಮತ್ತೀತತರಿದ್ದರು.