ಹೊನ್ನಾಳಿ : ಕೊರೊನಾ ಮೂರನೇ ಅಲೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಮುನ್ನೇಚ್ಚರಿಕೆಯಾಗಿ ಎಚ್. ಕಡದಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ತಾಲೂಕು ಕಚೇರಿಯ ಆವರದಲ್ಲಿ ತಾಲೂಕು ಕೊರೊನಾ ವಿಪತ್ತು ನಿರ್ವಹಣಾಸಮಿತಿ ಸಭೆ ಹಾಗೂ ಗಣರಾಜ್ಯೋತ್ಸವ ಕುರಿತು ಪೂರ್ವ ಬಾವಿ ಸಭೆ ನಡೆಸಿ ಅವರು ಮಾತನಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ 54 ಸಕ್ರೀಯ ಪ್ರಕರಣಗಳಿದ್ದು, ಅವಳಿ ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಅಧಿಕಾರಿಗಳು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುವಂತೆ ಕೆರೆ ನೀಡಿದ ಶಾಸಕರು ನಾನು ನಿಮ್ಮೊಂದಿಗಿದ್ದೇನೆ ಎಂದರು.
ಈಗಾಗಲೇ ಮುನ್ನೇಚ್ಚರಿಕಾ ಕ್ರಮವಾಗಿ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಮೂರು ಅಂಬ್ಯುಲೆನ್ಸ್, ಆಕ್ಸಿಜನ್ ಕಾನ್ಸಟೇಟರ್ ಸೇರಿದಂತೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಕೊರೊನಾ ಮೂರನೇ ಅಲೆ ಬರ ಬಾರದೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ ಎಂದರು.
ಕೊರೊನಾ ಮೂರನೇ ಅಲೆಯ ಬಗ್ಗೆ ಜನರು ಎಚ್ಚರಿಕೆಯಿಂದ ಇರ ಬೇಕೆಂದು ಕಿವಿ ಮಾತು ಹೇಳಿದ ಶಾಸಕರು, ಪ್ರತಿಯೊಬ್ಬರೂ ಸರ್ಕಾರದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯನ್ನು ಅಧಿಕಾರಿಗಳ ಪರಿಶ್ರಮದಿಂದ ಸಮರ್ಥವಾಗಿ ಎದುರಿಸಿದ್ದೇವು, ಇದೀಗ ಕೊರೊನಾ ಮೂರನೇ ಅಲೆ ವ್ಯಾಪಾಕವಾಗಿ ಹರಡುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.
ಕೊರೊನಾ ಮೂರನೇ ಅಲೆ ಪ್ರತಿಯೊಬ್ಬರಿಗೂ ಬರುತ್ತದೆಂದು ಹೇಳಲಾಗುತ್ತಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದ ಶಾಸಕರು, ಲಾಕ್‍ಡೌನ್ ಮಾಡಿದರೇ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ, ಸರ್ಕಾರದ ಆರ್ಥಿಕತೆಯ ಜೊತೆಗೆ ಕಡು ಬಡವರು ಜೀವನ ನಿರ್ವಹಣೆ ಕಷ್ಟವಾಗಲಿದ್ದು, ಜನರು ದಯಮಾಡಿ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಮೂಲಕ ಅಧಿಕಾರಿಗಳ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಮೊದಲನೇ ಹಾಗೂ ಎರಡನೇ ಲಸಿಕೆ ಸೇರಿದಂತೆ ಕೊರೊನಾ ವಾರಿಯರ್ಸಗಳಿಗೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ, 15 ವರ್ಷ ಮೇಲ್ಪಟ್ಟವರಿಗೆ ವಿದ್ಯಾರ್ಥಿಗಳಿಗೆ ಲಸಿಕೆ ಸೇರಿದಂತೆ ಒಟ್ಟು 3,33,274 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದ ಶಾಸಕರು, ನಿರೀಕ್ಷೆಗಿಂತಲೂ ಹೆಚ್ಚಿನ ಲಸಿಕೆ ನೀಡಿದ್ದು ಅದಕ್ಕೆ ಅಧಿಕಾರಿಗಳು ಕಾರಣ, ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.
ದೇಶದಲ್ಲಿ 160 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರನ್ನು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆಂದರು.
ಇನ್ನು ರಾಜ್ಯದಲ್ಲೂ 9,12,79,920 ಜನರಿಗೆ ಲಸಿಕೆ ನೀಡಿದ್ದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೋವಿಡ್ ನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ, ಕೇಂದ್ರ ಸರ್ಕಾರ ಐವತ್ತು ಸಾವಿರ ನೀಡುತ್ತಿದೆ. ಅದೇ ರೀತಿ ಕೆಲವರು ಕೋವಿಡ್ ನಿಂದ ಮೃತಪಟ್ಟಿದ್ದರೂ ಸರ್ಕಾರದಿಂದ ಹಣ ಬರದೇ ಇರುವುದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಯಾರೇ ಕೋವಿಡ್ ನಿಂದ ಮೃತಪಟ್ಟಿದ್ದರೂ ಅವರಿಗೆ ಐವತ್ತು ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದಾರೆ ಎಂದರು.
ಸರಳ ಗಣರಾಜ್ಯೋತ್ಸವಕ್ಕೆ ತೀರ್ಮಾನ : ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಸರಳವಾಗಿ ಗಣರಾಜ್ಯೋತ್ಸವ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಹೊನ್ನಾಳಿಯ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ನ್ಯಾಮತಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕೋವಿಡ್ ನಿಯಮಗಳ ಪ್ರಕಾರ ಸರಳವಾಗಿ ಆಚರಿಸಲಾಗುವುದು ಎಂದರು.
ಈ ಸಂದರ್ಭ ತಹಶೀಲ್ದಾರ್ ಬಸವರಾಜ ಕೊಟ್ಟೂರಾ, ತಾಲೂಕು ಆರೋಗ್ಯಾಧೀಕಾರಿ ಡಾ|| ಕೆಂಚಪ್ಪ, ಸಿಪಿಐ ದೇವರಾಜ್, ಪುರಸಭೆ ಮುಖ್ಯಾಧಿಕಾರಿ ಪಂಪಾಪತಿನಾಯ್ಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.