ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಮಕ್ಕಳು ಸೇರಿದಂತೆ 150 ಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದ್ದು, ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವಳಿ ತಾಲೂಕಿನ ಜನರಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.
ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ವಸತಿ ಶಾಲೆಯಲ್ಲಿ 19 ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಕೊರೊನಾ ಜಾಗೃತಿ ಮೂಡಿಸಿ ಮಾತನಾಡಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ವಸತಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರು ಸೇರಿದಂತೆ 50 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು,ಮಕ್ಕಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದರು.
ಈಗಾಗಲೇ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ 150 ಕ್ಕೂ ಹೆಚ್ಚು ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಮುನ್ನೇಚ್ಚರಿಕಾ ಕ್ರಮವಾಗಿ ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆಗೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಅವಳಿ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲು ಒಂದು ಕಡೆ ಜನರ ನಿರ್ಲಕ್ಷ ಕಾರಣ ಎಂದು ಬೇಸರ ವ್ಯಕ್ತ ಪಡಿಸಿದ ಶಾಸಕರು, ಜನರು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ಮನವಿ ಮಾಡಿದರು,
ಕೊರೊನಾ ಮೂರನೇ ಅಲೆ ಎಲ್ಲರಿಗೂ ಬಂದು ಹೋಗುತ್ತದೇ ಎಂದು ಹೇಳುತ್ತಿದ್ದು ಜನರು ಕೊರೊನಾವನ್ನು ನಿರ್ಲಕ್ಷಿಸಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬುವಂತೆ ಕೊರೊನಾದಿಂದ ಎಚ್ಚರವಾಗಿರುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿಗಳಿಗೆ ಮಾಹಿತಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾಧ್ಯಂತ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿರುವುದಾಗಿ ರೇಣುಕಾಚಾರ್ಯ ತಿಳಿಸಿದ್ದು, ಕೊರೊನಾ ತಡೆಗಟ್ಟಲು ನಾನು ನಿಮ್ಮೊಂದಿಗೆ ಇರುವುದಾಗಿ ಬರವಸೆ ನೀಡಿದ್ದಾರೆ ಎಂದರು.
ವಿವಿಧ ಶಾಲೆಗಳು ಸೀಲ್ ಡೌನ್ : ತಾಲೂಕಿನ ಎಚ್,ಕಡದಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 19 ಮಕ್ಕಳಿಗೆ, ಸಿಂಗಟಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆರು ಜನ ಮಕ್ಕಳಿಗೆ, ಮಾದನಬಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 18 ಜನರಿಗೆ, ಕ್ಯಾಸಿನಕೆರೆ ಹಿರಿಯ ಪ್ರಾಮಿಕ ಶಾಲೆಯ ಆರು ಮಕ್ಕಳಿಗೆ, ಜೀವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಒಂದು ವಾರ ಈ ಮೇಲ್ಕಂಡ ಶಾಲೆಗಳನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾಹಿತಿ ನೀಡಿದರು.
ಈ ಸಂದರ್ಭ ಕೆಎಸ್‍ಡಿಎಲ್ ನಿದೇರ್ಶಕ ಶಿವು ಹುಡೇಡ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಸುಪ್ರಿಯಾ ಕೆ.ಎನ್, ನಾಮದೇವ್ ಸೇರಿದಂತೆ ಶಿಕ್ಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿದ್ದರು.