ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆ ಬೇಡ

ಮಂಗಳೂರು: ಉಡುಪಿ ಸ್ಕಾರ್ಫ್ ವಿವಾದ ಸಂಬಂಧ ಶಿಕ್ಷಣ ಸಚಿವರು “ಸ್ಕಾರ್ಫ್ ಧರಿಸುವುದು ಅಶಿಸ್ತು” ಎಂದು ನೀಡಿರುವ ಹೇಳಿಕೆಯನ್ನು ಯೂತ್ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ, ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ಸುರೈಯ್ಯ ಅಂಜುಮ್ ತೀವ್ರವಾಗಿ ಖಂಡಿಸಿದ್ದಾರೆ. ಅದಲ್ಲದೇ, ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಅಚರಣೆ ಕೂಡಾ ಸಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

“ಧಾರ್ಮಿಕ ಆಚರಣೆಗಳಿಗೆ ನಮ್ಮ‌ ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ಆದರೆ‌ ಶಾಲಾ-ಕಾಲೇಜು ವಿದ್ಯೆ ಕಲಿಯುವ ಪುಣ್ಯ ಸ್ಥಳವಾಗಿದೆ. ಹೀಗಾಗಿ ಮನೆಯಿಂದ ಹೊರ ಬಂದ ತಕ್ಷಣ ನಾವೆಲ್ಲರೂ ಧಾರ್ಮಿಕ ಭಾವನೆ ಮರೆತು “ಭಾರತೀಯರು” ಎಂಬ ಮನೋಸ್ಥಿತಿ ಇಟ್ಟುಕೊಳ್ಳುವುದು ಸೂಕ್ತ” ಎಂದು ತಿಳಿಸಿದ್ದಾರೆ.

“ವಿದ್ಯೆ ಕಲಿಯುವ ಮಕ್ಕಳಲ್ಲಿ ಕೇಸರಿ ಶಾಲು, ಕಪ್ಪು ಶಾಲು ಎಂಬ ಅನಗತ್ಯ ವಿಚಾರಗಳ ಕುರಿತು ವಿಷ ಬೀಜ ಬಿತ್ತಿ ದೇಶದ ಭವಿಷ್ಯ‌ ನಿರ್ಮಾಣಕಾರರ ಮೇಲೆ ಜಾತೀಯತೆ ಬೀರುವುದು ಸರಿಯಲ್ಲ. ನಾವೆಲ್ಲ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಮಾನತೆ‌ ಅನ್ನುವ ಪದಕ್ಕೆ ಹೆಚ್ಚು ಒತ್ತು ನೀಡುವುದು ಒಳಿತು.‌

ಕ್ಯಾಂಪಸ್ ಗಳಲ್ಲಿ ಕೇಸರಿ ಶಾಲು, ಬಿಂದಿ, ತಿಲಕ, ಕೈ ಬಳೆ, ಹಿಜಾಬ್ ಈ ವಿಚಾರಗಳು ಚರ್ಚೆಯಾಗ ಕೂಡದು. ಈ ಸಮಸ್ಯೆ ಸೌಹಾರ್ದತೆಯ ನಿಟ್ಟಿನಲ್ಲಿ ಬಗೆಹರಿಯಬೇಕಿದ್ದು ಇದರಿಂದ ಗಲಭೆಗಳಿಗೆ ಅವಕಾಶ ಆಗಬಾರದು” ಎಂದು ಹೇಳಿದ್ದಾರೆ.‌

ಕೆಲ ಹಿಜಾಬ್ ಧರಿಸಿ ಕುಳಿತ ವಿದ್ಯಾರ್ಥಿನಿಯರು ಕಿವಿಗಳಿಗೆ ಹೆಡ್ ಫೋನ್ ಹಾಕಿದ್ದ‌ ಪ್ರಕರಣಗಳು ಪತ್ತೆ ಆಗಿದ್ದ ಹಿನ್ನಲೆಯಲ್ಲಿ ಯೂನಿಫಾರ್ಮಿಟಿ ಎಂಬ ರೂಲ್ಸ್ ತರಲಾಗಿತ್ತು. ಅಷ್ಟಕ್ಕೂ ಇಸ್ಲಾಂ ಧರ್ಮದ ಪ್ರಕಾರ ಹಿಜಾಬ್ ಧರಿಸಿ ಕುಳಿತು ಪಾಠ ಕೇಳುವ ಉದ್ದೇಶವಿದ್ದರೆ ಹಲವು ಇಸ್ಲಾಮಿಕ್ ಕಾಲೇಜುಗಳಲ್ಲಿ ಇದಕ್ಕೆ ಅವಕಾಶ ನೀಡಲಾಗಿದ್ದು ವಿದ್ಯಾರ್ಥಿನಿಯರು ಪೋಷಕರ ಬಳಿ ಅಂತಹ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವಿದ್ಯಾಭ್ಯಾಸ ಪಡೆಯಬಹುದು ಸಲಹೆ ನೀಡಿದ್ದಾರೆ.

ಈಗಾಗಲೇ, ಉಡುಪಿ ಸ್ಕಾರ್ಫ್ ವಿವಾದ ಸಂಬಂಧ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ NSUI ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

Leave a Reply

Your email address will not be published. Required fields are marked *