ನ್ಯಾಮತಿ : ಕೆರೆಗಳು ನಮ್ಮ ಜೀವನಾಡಿ, ಅವುಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವುದರ ಜೊತೆಗೆ, ಕೆರೆಗಳ ಅಭಿವೃದ್ದಿಗೆ ನಾನು ಮುಂದಾಗಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ 95 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಕೆರೆಗಳು ನಮ್ಮ ಜೀವನಾಡಿª, ಅವುಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ 118 ಕೆರೆಗಳನ್ನು 518 ಕೋಟಿ ರೂಪಾಯಿ ವೆಚ್ಚದಲ್ಲಿ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಚುನಾವಣೆ ಪೂರ್ವದಲ್ಲಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವುದಾಗಿ ಮಾತು ಕೊಟ್ಟಿದ್ದು, ಅದರಂತೆ ನಾನು ನಡೆದುಕೊಂಡಿದ್ದೇನೆ ಎಂದರು.
ಅದೇ ರೀತಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 50.25 ಲಕ್ಷ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗಳ ಆಧುನೀಕರಣಕ್ಕೆ 17.75 ಕೋಟಿ, ತಡೆಗಡೆ ನಿರ್ಮಾಣಕ್ಕೆ 8 ಕೋಟಿ, ಅಣೆಕಟ್ಟುಗಳ ನಿರ್ಮಾಣಕ್ಕೆ 24.50 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಸದ್ಯದಲ್ಲೇ ಕೆಲಸ ಆರಂಭಗೊಳ್ಳಲಿದೆ ಎಂದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ತಾಲೂಕಿನ ಹೊಸಜೋಗ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡದಲ್ಲಿ ಗುದ್ದಲಿಪೂಜೆ ನೆರವೇರಿಸಿ ರೇಣುಕಾಚಾರ್ಯ, 2.60 ಕೋಟಿ ರೂಪಾಯಿಯನ್ನು ಈ ಗ್ರಾಮದ ಕೆರೆಗಳನ್ನು ತುಂಬಿಸುವುದರ ಜೊತೆಗೆ ಅಭಿವೃದ್ದಿಗೆ ಮೀಸಲಿಟ್ಟಿದ್ದೇನೆ ಎಂದರು. ಹಳೇಜೋಗ ಗ್ರಾಮಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಈ ಭಾಗದ ಕೆರೆಗಳನ್ನು ತುಂಬಿಸುವುದ ಜೊತೆಗೆ ಅವುಗಳ ಅಭಿವೃದ್ದಿಗೆ 4.20 ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದರು. ಚಿನ್ನಿಕಟ್ಟೆ ಗ್ರಾಮದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿವೇಶನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಅದೇ ರೀತಿ ಗ್ರಾಮದಲ್ಲಿ 4.41 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವುದರ ಜೊತೆಗೆ, ಕೆರೆಗಳ ಅಭಿವೃದ್ದಿಗೆ ಮೀಸಲಿಡಲಾಗಿದೆ ಎಂದರು. ಇನ್ನು ಸವಳಂಗ ಗ್ರಾಮದಲ್ಲಿ ಏಳು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು, ಈ ಗ್ರಾಮದಲ್ಲಿ ಕೆರೆಗಳನ್ನು ತುಂಬಿಸುವುದರ ಜೊತೆಗೆ ಕೆರೆಗಳ ಅಭಿವೃದ್ದಿಗೆ 13 ಕೋಟಿ ಮೀಸಲಿಡಲಾಗಿದೆ ಎಂದರು. ಫಲವನಹಳ್ಳಿ ಗ್ರಾಮದಲ್ಲಿ 28.50 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಗ್ರಾ.ಪಂ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು, ಗ್ರಾಮದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡುವುದರ ಜೊತೆಗೆ ಕೆರೆ ತುಂಬಿಸುವ ಯೋಜನೆಗೆ 30 ಲಕ್ಷ ಮೀಸಲಾಗಿದೆ ಎಂದರು. ಕಂಚಿಗನಹಳ್ಳಿ ಗ್ರಾಮದಲ್ಲಿ 3.50 ಲಕ್ಷ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ರೇಣುಕಾಚಾರ್ಯ ಈ ಗ್ರಾಮದಲ್ಲಿ ಕೆರೆಗಳನ್ನು ತುಂಬಿಸಲು 50 ಲಕ್ಷ ಮೀಸಲಿಡಲಾಗಿದೆ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಲಕ್ಷ್ಮೀ, ಸದಸ್ಯರಾದ ಪರಶುರಾಮ ಎ.ಕೆ, ಪ್ರತೀಮ, ರಾಮು, ಮಹೇಶ್ವರಪ್ಪ, ವೀರೇಶ್ ನಾಯ್ಕ ,ಕೇಶನಾಯ್ಕ, ಕಾಂತರಾಜ ಸೇರಿದಂತೆ ಗ್ರಾಮದ ಮುಖಂಡರಾದ ಸಿದ್ದೇಶ್, ಪಳನಿ, ಯಶ್ವಂತ್ ಸೇರಿದಂತೆ ಮತ್ತೀತತರಿದ್ದರು.