ಹೊನ್ನಾಳಿ : ರೈತರಿಗೆ ಹೈನುಗಾರಿಕೆ ವಿಶೇಷವಾದ ವರದಾನವಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ಸೊರಟೂರು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟ, ಹಾಲು ಉತ್ಪಾದಕರ ಸಹಕಾರ ಸಂಘ ಸೊಟರೂರು ಇವರ ಸಂಯುಕ್ತ ಆಶ್ರಯದಲ್ಲಿ ಕರುಗಳ ಪ್ರದರ್ಶನ ಮತ್ತು ಪಶುಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ರೈತರ ಉಪಕಸುಬಾಗಿದ್ದು, ರೈತರು ಮನೆಯಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಅದೇ ರೀತಿ ಜಾನುವಾರುಗಳನ್ನು ನೋಡಿಕೊಳ್ಳುತ್ತಿದ್ದು, ಹೈನುಗಾರಿಕೆ ರೈತರಿಗೆ ವರದಾನವಾಗಿದೆ ಎಂದರು.
ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನಲ್ಲಿ 116 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿನಿತ್ಯ 60 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ ಎಂದರು.
ಶಿವಮೊಗ್ಗ,ಚಿತ್ರದುರ್ಗ ಹಾಗೂ ದಾವಣಗೆರೆ ಸಹಕಾರಿ ಹಾಲು ಒಕ್ಕೂಟದಿಂದ ದಾವಣಗೆರೆ ಬೇರ್ಪಡಿಸ ಬೇಕೆಂದು ರೈತರ ಬೇಡಿಕೆ ಇದ್ದು, ಈ ಬಾರೀಯ ಬಜೆಟ್‍ನಲ್ಲಿ ದಾವಣಗೆರೆ ಒಕ್ಕೂಟವನ್ನು ಬೇರ್ಪಡಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ಮನವಿ ಮಾಡುವುದಾಗಿ ರೇಣುಕಾಚಾರ್ಯ ತಿಳಿಸಿದರು.
ಕರುಗಳ ಪ್ರದರ್ಶನ ಹಾಗೂ ಪಶುಚಿಕಿತ್ಸಾ ಶಿಬಿರದಲ್ಲಿ ನೂರಾರು ಜನ ರೈತರು ಪಾಲ್ಗೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದ ರೇಣುಕಾಚಾರ್ಯ, ಸರ್ಕಾರ ಸದಾ ರೈತರೊಂದಿಗಿದೆ ಎಂದರು.
ಕೊಟ್ಟಮಾತಿನಂತೆ ನಡೆದುಕೊಂಡಿದ್ದೇನೆ : ಚುನಾವಣಾ ಪೂರ್ವದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಕೆರೆಗಳನ್ನು ತುಂಬಿಸುತ್ತೇನೆ, ಇಲ್ಲವಾದರೆ ರಾಜಕೀಯ ನಿವೃತ್ತಿಯಾಗುತ್ತೇನೆಂದು ಹೇಳಿದ್ದೇ. ಅದರಂತೆ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸಲು 518 ಕೋಟಿ ಹಣ ಬಿಡುಗಡೆಯಾಗಿದ್ದು, ಕೆಲಸ ಪ್ರಗತಿಯಲ್ಲಿದೇ ಎಂದ ರೇಣುಕಾಚಾರ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದರು.
ಸೊರಟೂರು ಗ್ರಾಮ ಅಭಿವೃದ್ದಿ : ಸೂರಟೂರು ಗ್ರಾಮದಲ್ಲಿ ಈಗಾಗಲೇ 80 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಮತ್ತೆ 1.20 ಕೋಟಿ ಅನುದಾನವನ್ನು ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು ಹಾಕಲಾಗಿದೆ ಎಂದ ರೇಣುಕಾಚಾರ್ಯ, ಗ್ರಾಮದಲ್ಲಿ ಕೆರೆಗಳ ಅಭಿವೃದ್ದಿ ಹಾಗೂ ಕೆರೆಗಳನ್ನು ತುಂಬಿಸಲು 2.93 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು. ಅದೇ ರೀತಿ ಗ್ರಾಮ ಸರ್ಕಾರಿ ಶಾಲೆಗೆ ಎರಡು ಕೊಠಡಿ ಬೇಕೆಂದು ಗ್ರಾಮಸ್ಥರು ಕೇಳಿದ್ದು ಎರಡು ಕೊಠಡಿ ಕಟ್ಟಲು 25 ಲಕ್ಷವನ್ನು ಕೊಡಿಸುವುದಾಗಿ ಹೇಳಿದರು.
ಈ ಸಂದರ್ಭ ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕರಾದ ಬಸವರಾಜಪ್ಪ ಹನುಮನಹಳ್ಳಿ, ಸೊರಟೂರು ಗ್ರಾ.ಪಂ ಅಧ್ಯಕ್ಷರಾದ ರಾಧಮ್ಮ, ಉಪಾಧ್ಯಕ್ಷರಾದ ನಾಗರತ್ನಾಬಾಯಿ, ಸದಸ್ಯರಾದ ಬಸವನಗೌಡ ಪಾಟೀಲ್,ಕೆ.ಮರಿಯಪ್ಪ, ಹನುಮಂತಪ್ಪ, ಪರಶುರಾಮರಾವ್, ವಿರಪಾಕ್ಷಪ್ಪ, ಸುಮಾ, ರಂಜಿತಾ, ಕೆಂಚಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶಿವರಾಜ್ ಕುಮಾರ್, ಉಪಾಧ್ಯಕ್ಷರಾದ ಗೀತಾ ಸೇರಿದಂತೆ ಪಶುಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತೀತರರಿದ್ದರು.