ಹೊನ್ನಾಳಿ :-ಜ 29;-ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟಿ.ಬಿ.ವೃತ್ತದ ಕಡೆ ಹೋಗುವ ರಾಜ್ಯ ಹೆದ್ದಾರಿಯ ವಿಭಜಕದ ಮಧ್ಯ ಅತ್ಯಂತ ಹಸಿರಾಗಿ ಬೆಳೆದು ನಿಂತ ಮದರಂಗಿ, ಲಕ್ಕಿಗಿಡ, ನಂದಿಬೆಟ್ಟದ ಹೂ, ಬಿಳಿ ಎಕ್ಕೆ, ಕಣಗಲು, ಹೊಂಗೆ ಇತ್ಯಾದಿ ಆಡು, ದನಗಳು ತಿನ್ನದ ನೂರಾರು ಗಿಡಗಳು ಎತ್ತರಕ್ಕೆ ಬೆಳೆದು ರಸ್ತೆಯ ಮಧ್ಯ ಹಸಿರು ತೋರಣಗಟ್ಟಿ ದಾರಿ ಹೋಕರಿಗೆ ಯನ ಮಹೋತ್ಸವ ನೀಡುತ್ತವೆ. ಇಷ್ಟು ಸಮೃದ್ಧವಾಗಿ ಬೆಳೆದಿರುವ ಈ ಸಸಿಗಳನ್ನು ರಸ್ತೆ ವಿಭಜಕದ ಮಧ್ಯ ಅರಣ್ಯ ಇಲಾಖೆಯವರು ಗಮನ ಹರಿಸುವುದಕ್ಕಿಂತ ಮುಂಚೆಯೇ ಹೊನ್ನಾಳಿಯ ಶ್ರೀ ಚಂದ್ರಪ್ಪ ಎಂ.ಸಿ, ಎಂಬ ಸಾಮಾನ್ಯವ್ಯಕ್ತಿ ಗಿಡನಟ್ಟು ದಿನನಿತ್ಯ ಅವುಗಳಿಗೆ ನೀರೆರೆದು ಸಾಲುಮರದ ತಿಮ್ಮಕ್ಕನಷ್ಟು ಸುದೀರ್ಘ ಉದ್ದಕ್ಕೆಲ್ಲದಿದ್ದರೂ ಸುಮಾರು ಒಂದು ಸಾವಿರ ಅಡಿಗಳಷ್ಟು ದೂರ ಈ ಹಸಿರು ವನ ಕಂಗೊಳಿಸುತ್ತದೆ. ಒಂದು ಪುಟ್ಟ ಬೀಡಾ ಅಂಗಡಿ ಮಾಲೀಕರಾದ ಶ್ರೀ ಚಂದ್ರಪ್ಪನವರಿಗೆ ಈ ರೀತಿ ಸೇವೆ ಮಾಡುವುದರಲ್ಲಿ ಎಂತದೋ ತೃಪ್ತಿ ಏನೋ ಒಂದು ಆನಂದ. ನಿತ್ಯ ಬೆಳಗ್ಗೆ ಇವರ ದಿನಚರಿ ಆರಂಭಗೊಳ್ಳುವುದು ಪಕ್ಷಿಗಳಿಗೆ ಆಹಾರ ಹಾಕುವುದರ ಮುಖೇನ, ನಿತ್ಯ ಬೆಳಗ್ಗೆ 6 ರಿಂದ 7 ಗಂಟೆಯೊಳಗೆ ತನ್ನ ಬೀಡಾ ಮುಂದೆ ನೂರಾರು ಪಕ್ಷಿಗಳು ಇವರು ಕೊಡುವ ಊಟಕ್ಕೆ ಅಂಗಡಿ ಕಾಯುತ್ತಿರುತ್ತವೆ. ತನ್ನ ಅಂಗಡಿಯಲ್ಲಿ ಮಾರಲಿಟ್ಟಿರುವ ಕಾರ, ಬಟಾಣಿ, ಮಂಡಕ್ಕಿಗಳನ್ನು ಯಥೇಚ್ಛವಾಗಿ ಪಕ್ಷಿಗಳಿಗೆ ತಿನ್ನಿಸುತ್ತಾರೆ.
ಹಳ್ಳಿಯಿಂದ ಬರುವ ಜನಗಳ ದಾಹ ತಣಿಸಲು ಅದೇ ಹೆದ್ದಾರಿ ಪಕ್ಕದ ತನ್ನ ಅಂಗಡಿ ಮುಂದೆ ಕುಡಿಯುವ ನೀರಿಟ್ಟು ಅರವಟ್ಟಿಗೆ’ಯ ಸಂಸ್ಕೃತಿಯನ್ನು ನೆನಪಿಸುತ್ತಾರೆ. ಅಕ್ಷರದ ಜ್ಞಾನವೇ ಇಲ್ಲದ ಇವರು ಇತಿಹಾಸದ ಸಾವಿರಕ್ಕೂ ಹೆಚ್ಚು ನಾಣ್ಯಗಳನ್ನು ಸಂಗ್ರಹಿಸಿ ತಾಲ್ಲೂಕಿನ ಅನೇಕ ಸಾಹಿತ್ಯ ಸಮ್ಮೇಳನ ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಇತಿಹಾಸದ ಅರಿವು ಮೂಡಿಸಿದ್ದಾರೆ. ಕನ್ನಡ ನಾಡಿನ ಶ್ರೇಷ್ಠ ಸಂತರಾದ ಶ್ರೀ ಬಸವಣ್ಣ ಮತ್ತು ಕನಕದಾಸರ ಭಾವಚಿತ್ರವಿರುವ ನಾಣ್ಯಗಳಿಲ್ಲ ಎಂದು, 5 ರೂ ನಾಣ್ಯಗಳಲ್ಲಿ ಬಸವಣ್ಣ ಮತ್ತು ಕನಕ ಮುಖವಿರಬೇಕೆಂದು ದೇಶದ ಹಣಕಾಸು ಮಂತ್ರಿ, ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಪತ್ರಬರೆದು ಅವರಿಂದ ಸೂಕ್ತ ಉತ್ತರ ಪಡೆದಿದ್ದಾರೆ. ವಿಶ್ವತಾಯಂದಿರ ದಿನದಂದು ತನ್ನ ಸ್ವಂತ ಕೈಯಿಂದ ಹಣ ಖರ್ಚು ಮಾಡಿ ತಾಯಂದಿರ ದಿನವನ್ನು ಆಚರಿಸಿ ಜಗತ್ತಿನ ತಾಯಿಯರಿಗೆ ತನ್ನ ಋಣ ತೀರಿಸಿದ್ದಾರೆ. ಯಾಕೆಂದರೆ ತನ್ನ ತಾಯಿಯವರು ಬಹುಬೇಗ ತೀರಿಕೊಂಡಿದ್ದರಿಂದ ಅವರ ಮೇಲಿನ ಮಾತೃಭಕ್ತಿಗಾಗಿ ತನ್ನ ತಾಯಿಯ ಕಲ್ಲಿನ ಮತ್ಥಳಿಯನ್ನು ಮಾಡಿಸಿ, ನಿತ್ಯ ದೇವರ ಮನೆಯಲ್ಲಿ ಅದನ್ನು ಪತ್ನಿ & ಪತ್ತರ ಸಮೇತ ಆರಾಧಿಸುತ್ತಿದ್ದಾರೆ. ಇಷ್ಟೆಲ್ಲಾ ಕೈಂಕರ್ಯಗಳನ್ನು ಮಾಡುವ ಅವರಿಗೆ ತಾನು ಮಾಡಿದೆನೆಂಬ ಗರ್ವವಿಲ್ಲ. ಅವರ ಮುಖದಲ್ಲಿ ಸದಾ ವಿನೀತಭಾವ, ಇನ್ನೂ ಮಾಡುವುದು ತುಂಬಾ ಇದೆ ಎಂಬ ಅವಸರದ ನಿಲುವು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಯಾರ ನೆರವು ಮರ್ಜಿಗೂ ಕೈ ಚಾಚದೆ ತನ್ನ ದುಡಿಮೆಯ 10 ರಷ್ಟು ಭಾಗವನ್ನು ಈ ಸೇವೆಗೆ ಸದ್ವಿನಿಯೋಗ ಮಾಡಿರುವ ಚಂದ್ರಪ್ಪನಂತವರು ವಿರಳದಲ್ಲಿ ಅತಿವಿರಳ ಎನ್ನಬಹುದು.ಅನ್ನುತ್ತಾರೆ ಪ್ರಧ್ಯಾಪಕರಾದ ಮುಂಜನಾಥ ಗೊಲ್ಲರಹಳ್ಳಿ.