ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ, ಕುಂದುಕೊರತೆ ಸಭೆ ಶನಿವಾರ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ
ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪರಿಶಷ್ಟ
ಪಂಗಡಗಳ ಮುಖಂಡರು ಹಲವಾರು ಸಮಸ್ಯೆಗಳನ್ನು
ಅನಾವರಣಗೊಳಿಸಿದರು, ಬಹುತೇಕ ದೂರುಗಳು ಅಬಕಾರಿ
ಇಲಾಖೆಯತ್ತಲೇ ಬೊಟ್ಟು ಮಾಡುತಿದ್ದವು.
ಮುಖಂಡರಾದ ಸೊರಟೂರು ಹನುಮಂತಪ್ಪ ಮಾತನಾಡಿ
ಕಡದಕಟ್ಟೆಯ ಹಲವು ಮನೆಗಳಲ್ಲಿ ಬ್ರಾಂದಿ ಮಾರಾಟ ಎಗ್ಗಿಲ್ಲದೇ
ನಡೆಯುತಿದ್ದು ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗಂಡಿಲ್ಲ,
ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಸನಿಹವೇ ಇದ್ದು ಇದರಿಂದ
ವಿದ್ಯಾರ್ಥಿಗಳ ಮೇಲೆ ಹೆಚ್ಚು
ದುಷ್ಪರಿಣಾಮಗಳಾಗುತ್ತಿವೆ,ಕೆಲವರು ದೂರು ನೀಡಲು
ಹಿಂಜರಿಯುತಿದ್ದು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು,
ಹಾಗು ಹೆಲಿಪ್ಯಾಡ್ ಹತ್ತಿರ ಕಳ್ಳತನಗಳಾಗುತಿದ್ದು ಸಿ.ಸಿ. ಕ್ಯಾಮರ
ಹಾಕಿಸಲು ಮನವಿ ಮಾಡಿದರು.
ಬೆನಕನಹಳ್ಳಿ ಹನುಮಂತಪ್ಪ ಮಾತನಾಡಿ, ಬೆನಕನಹಳ್ಳಿಯಲ್ಲಿ
4 ಸ್ಮಶಾನಗಳಿದ್ದು, ಒಂದು ಸ್ಮಶಾನಕ್ಕೆ ವೀರಶೈವ ಸ್ಮಶಾನ ಎಂದು
ಬೋರ್ಡ್ ಹಾಕಿಕೊಂಡಿದ್ದು ಅದು ಸರ್ಕಾರಿ ಗೋಮಾಳವಾಗಿರುತ್ತದೆ
ಎಂದಾಗ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಕ್ರಿಯಿಸಿ,ಒಂದು ವೇಳೆ
ಅದು ಸರ್ಕಾರಿ ಜಾಗವಾಗಿದ್ದರೆ ಬೋರ್ಡ್ ಬದಲಿಸಿ ಸರ್ಕಾರಿ ಸ್ಮಶಾನ ಎಂದು
ನಾಮಫಲಕ ಹಾಕಿಸಲು ಸೂಚಿಸಿದರು. ಹೊನ್ನಾಳಿ ದಲಿತ ಕಾಲನಿಗಳಲ್ಲಿ
ಹಲವಾರು ಸಮಸ್ಯೆಗಳಿದ್ದು ಬೀಟ್ ಸರಿಯಾಗಿ ಆಗುತ್ತಿಲ್ಲ,
ಸದ್ಯದಲ್ಲೇ ಮಾರಿ ಜಾತ್ರೆ ಇದ್ದು ಕೋಣನ ಬಲಿ ನಿಷೇಧಿಸಬೇಕು
ಮತ್ತು ಬೇವಿನ ಸೊಪ್ಪು ಕಟ್ಟಿಕೊಂಡು ಸಲ್ಲಿಸುವ
ಸೇವೆಯನ್ನು ತಡೆಯಬೇಕೆಂದರು
ಹರಿಹರ ವಿಶ್ವನಾಥ್ ಮಾತನಾಡಿ ಗುತ್ತೂರು ಗ್ರಾ.ಪಂ. ಪಿಡಿ.ಓ
ಗಣರಾಜ್ಯೋತ್ಸವದಂದು ಕಾರ್ಯಕ್ರಮದಲ್ಲಿ ಅಂಬೇಡ್ಕರ್
ಪೋಟೋ ಇಟ್ಟಿಲ್ಲ ಅವರ ವಿರುದ್ದ ದೂರು ನೀಡಿದರೂ ಕ್ರಮ
ಜರುಗಿಸಿಲ್ಲ, ಕೂಡಲೇ ಅವರ ವಿರುದ್ದ ಕ್ರಮ
ಜರುಗಿಸಬೇಕೆಂದರು.
ಉಚ್ಚಂಗಿ ಪ್ರಸಾದ್ ಮಾತನಾಡಿ, ಸಂತೆಬೆನ್ನೂರು ಸ್ಮಶಾನ
ಬೇರೆಯವರ ಹೆಸರಲ್ಲಿದ್ದು ಅವರು ಬರೆದುಕೊಡಲು ಒಪ್ಪಿದ್ದಾರೆ,
ಎರಡೂ ಕಡೆಯವರು ಒಪ್ಪಿಕೊಂಡಿದ್ದರೂ ಚನ್ನಗಿರಿ ತಹಶೀಲ್ದಾರ್
ಸ್ಪಂದಿಸಿತ್ತಿಲ್ಲ ಹಾಗೂ ಕಂದಗಲ್ ಗ್ರಾಮದಲ್ಲಿ ವಿಧವೆಯೊಬ್ಬರ
ಮನೆ ಬಿದ್ದಿದ್ದು, ಮನೆ ಮಂಜೂರಿಗೆ ಕೇಳಿದರೆ ಪಿಡಿಒ ಉಡಾಫೆ ಉತ್ತರ
ನೀಡುತ್ತಾರೆಂದರು.
ಜಿ.ಪಂ. ಮಾಜಿ ಅಧ್ಯಕ್ಷರಾದ ಡಾ,ರಾಮಪ್ಪ ಮಾತನಾಡಿ ಜಾತಿ ನಿಂದನೆ
ಕೇಸ್ ಹಾಕಿದವರ ವಿರುದ್ದ ಪ್ರತಿ ದೂರು ದಾಖಲಿಸಲಾಗುತ್ತಿದೆ. ಇದು
ಆಗದಂತೆ ತಡೆಯಬೇಕು ಎಂದಾಗ ಎಸ್.ಪಿ ಯವರು
ಪ್ರತಿಕ್ರಿಯಿಸಿ,ಹಾಗೆ ಮಾಡಲು ಬರುವುದಿಲ್ಲ, ಯಾರೇ ದೂರು
ಕೊಟ್ಟರೂ ಸ್ವೀಕರಿಸಲೇಬೇಕಾಗುತ್ತದೆ ಎಂದರು
ಪೇಪರ್ ಚಂದ್ರಣ್ಣ ಮಾತನಾಡಿ, ಭಾಗೀರಥಿ ಸರ್ಕಲ್ ಸುತ್ತಮುತ್ತ
ರಾತ್ರಿ ವೇಳೆ ಪೆಟ್ರೋಲ್ ಕದಿಯುವವರ ಹಾವಳಿ ಹೆಚ್ಚಿದ್ದು
ಕ್ರಮ ಜರುಗಿಸಬೇಕೆಂದರು.
ಎಸೊಳ್ಳೆ ತಿಮ್ಮಣ್ಣ ಮಾತನಾಡಿ ಖಾಜಿಪುರ ಗ್ರಾಮದಲ್ಲಿ
ಹೆಣ್ಣುಮಗಳೊಬ್ಬಳ ಮೇಲೆ ದೌರ್ಜನ್ಯ ಆಗಿದ್ದು ಎಪ್.ಐ.ಆರ್.
ಆಗಿದ್ದರೂ ಆರೋಪಿಗಳನ್ನು ದಸ್ತಗಿರಿ ಮಾಡುತ್ತಿಲ್ಲವೆಂದರು.
ಶ್ರೀನಿವಾಸ್ ಮಾತನಾಡಿ ಪುಟಗನಾಳ್ ಗ್ರಾಮದಲ್ಲಿ 1 ಎಕರೆ ಸ್ಮಶಾನ
ಭೂಮಿ ಮಂಜೂರು ಮಾಡಿದ್ದಕ್ಕಾಗಿ ತಹಶೀಲ್ದಾರ್ ಹಾಗು
ಉಪವಿಭಾಗಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಹೂವಿನ ಮಡು ಚೆನ್ನಬಸಪ್ಪ ಮಾತನಾಡಿ,ಮಾಯಕೊಂಡದ
ಠಾಣೆ ಒಳಗೇ ಓರ್ವ ವ್ಯಕ್ತಿಯನ್ನು ಸಾಯಿಸಿದರು ಈ ಸಂಭಂಧ
ಎಷ್ಟೇ ಹೋರಾಟ ಮಾಡಿದರೂ ನ್ಯಾಯ ಸಿಕ್ಕಿಲ್ಲ, ಸಿಐಡಿ ಗೆ ವಹಿಸಲಾಗಿದೆ
ಎನ್ನುತಿದ್ದಾರೆ. ಈರೀತಿ ದಲಿತರ ಧ್ವನಿ ಅಡಗಿಸುತಿದ್ದಾರೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ದೇವಸ್ಥಾನಗಳಲ್ಲಿ
ಪ್ರವೇಶ ನಿರಾಕರಣೆ, ಕಟಿಂಗ್ ಶಾಪ್‍ಗಳಲ್ಲಿ ಕಟಿಂಗ್ ಮಾಡಲು
ನಿರಾಕರಿಸಿದರೆ ತಕ್ಷಣ ಸಮೀಪದ ಠಾಣೆಗೆ ದೂರು ನೀಡಿ ತಪ್ಪಿತಸ್ಥರ
ವಿರುದ್ದ ಕ್ರಮ ಕೈಗೊಳ್ಳಲಾಗುವುದು, ಹಾಗು ತಕ್ಷಣ
ಎಪ್.ಐ.ಆರ್ ಮಾಡಲಾಗುವುದು.ನಿಮ್ಮ ಯಾವುದೇ ಕುಂದು
ಕೊರತೆಗಳಿದ್ದರೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಿ ಅಥವ
112ಗೆ ಕರೆಮಾಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು,
ನಿಮ್ಮ ಯಾವುದೇ ದೂರುಗಳಿದ್ದರೂ ನನಗೇ ಕರೆಮಾಡಿ
ತಿಳಿಸಿದರೂ ತಕ್ಷಣ ಕ್ರಮವಹಿಸಲಾಗುವುದೆಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ,ಉಪವಿಭಾಧಿಕಾರಿ
ಮಮತ ಹೊಸಗೌಡರ್,ಅಬಕಾರಿ ಡಿ.ಸಿ. ಶಿವಪ್ರಸಾದ್,ಜಿ.ಪಂ.
ಉಪಕಾರ್ಯದರ್ಶಿ ಆನಂದ್,ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ ಮುಖಂಡರುಗಳಾದ, ಹರೀಶ್ ನ್ಯಾಮತಿ, ಚಂದ್ರಪ್ಪ,
ಹೆಗ್ಗೆರೆ ರಂಗಪ್ಪ, ಚೇತನ್ ಕುಮಾರ್, ಗೋಗೇಶ್, ಜಯಣ್ಣ
ಮುಂತಾದವರು ಮಾತನಾಡಿದರು.