ಹರಿಹರ: ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಇದರಿಂದಾಗಿ ಆದಿವಾಸಿ, ಬುಡಕಟ್ಟು ಸಮುದಾಯಗಳು, ಅಹಿಂದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯಗಳು ಆತಂಕದಲ್ಲಿವೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಮಂದಿರ, ಮಸೀದೆ ಮತ್ತು ಚರ್ಚುಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆಯ ಪಠಣವಾಗಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರುಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು. ಹರಿಹರದ ಪ್ರೊ.ಬಿ.ಕೃಷ್ಣಪ್ಪ ಸ್ಮಾರಕದಲ್ಲಿಎರಡು ದಿನಗಳ ಕಾಲ ಆಯೋಜಿಸಿರುವ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಘಟನಾ ಸಮಾವೇಶ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.
ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಒಂದು ವರ್ಗ ಶೋಷಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡು ಬಂದಿದೆ. ತಮ್ಮ ಕಾಲ ಹೆಜ್ಜೆಗಳನ್ನು ತಾವೇ ಅಳಿಸಿ ನಡೆದುಕೊಂಡು ಹೋಗುವ ಅಮಾನವೀಯ ಪದ್ದತಿಯನ್ನು ಮನುಸ್ಮೃತಿಯ ಪರಿಚಾರಕರು ಜಾರಿಯಲ್ಲಿಟ್ಟಿದ್ದರು. ಇಂಥವೆಲ್ಲ ಹೀನ ಪದ್ದತಿಗಳನ್ನು ಕಿತ್ತೊಸೆಯಲಿಕ್ಕಾಗಿ ಡಾ.ಅಂಬೇಡ್ಕರ್ ರವರಹ ಭಾರತ ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿದ್ದಾರೆ. ಮತ್ತೆ ಈಗ ಕೆಲ ಮನುಸ್ಮೃತಿಯ ಉಳಿದ ಪಳಿಯುಳಿಕೆಗಳು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಹಾಗೇನಾದರೂ ಆದರೆ ಈ ದೇಶ ಮತ್ತೊಂದು ಕ್ರಾಂತಿಯನ್ನು ಕಾಣಲಿದೆ ಎಂದು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಎಚ್ಚರಿಸಿದರು.
ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಬಾಳ್ವೆ ಮತ್ತು ಸ್ವಾಭಿಮಾನ ಬೋಧಿಸಿರುವ ಬುಧ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಹಿಂದೆಂದಿಗಿಂತಲೂ ಈಗ ಅತಿಹೆಚ್ಚು ಯುವಜನರನ್ನು ಸೆಳೆಯಬೇಕಿವೆ. ನಿರುದ್ಯೋಗ, ಅಜ್ಞಾನ, ಮತ್ತು ಹಸಿವು ಭಾರತವನ್ನು ಇನ್ನೂ ಪರಿಪೂರ್ಣವಾಗಿಸಿಲ್ಲ. ಆಳುವ ಸರ್ಕಾರಗಳು ಜನರ ಮೂಲಭೂತ ಹಕ್ಕುಗಳನ್ನು ನೀಡುವುದು ಬಿಟ್ಟು, ಜಾತಿ-ಧರ್ಮಗಳ ಮಧ್ಯ ಜಗಳ ಹಚ್ಚಲು ಕುಮ್ಮಕ್ಕು ನೀಡುತ್ತಿದೆ. ದಲಿತ, ಅಲ್ಪಸಂಖ್ಯಾತ ಹಾಗೂ ಆದಿವಾಸಿ ಬುಡಕಟ್ಟು ಸಮುದಾಯಗಳು ಅನ್ಯೋನ್ಯವಾಗಿ ಬದುಕಬಾರದೆಂದು ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆ. ಈ ಅಪಾಯವನ್ನು ನಾವೆಲ್ಲ ಈಗಲೇ ಗುರುತಿಸಿ ಅದಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.
ಮಾನವ ಬಂಧುತ್ವ ವೇದಿಕೆಯ ಸಂಚಾಲಕರಾದ ನ್ಯಾಯವಾದಿ ಎನ್ ಅನಂತನಾಯ್ಕ ಮಾತನಾಡಿ, ಒಂದು ಕಡೆ ಕೋಮುವಾದ ಮತ್ತೊಂದು ಕಡೆ ಮತಾಂಧತೆ ರಾಜ್ಯವನ್ನು ಆಕ್ರಮಿಸಲು ಹೊಂಚು ಹಾಕುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕು. ಇದಕ್ಕಾಗಿ ರಾಜ್ಯಾದ್ಯಂತ ಮಾನವ ಬಂಧುತ್ವ ವೇದಿಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ನಾಡಿನ ಎಲ್ಲ ಸಮುದಾಯಗಳ ಮಧ್ಯೆ ಬಂಧುತ್ವ ಬೆಸೆಯಲಿಕ್ಕಾಗಿ ಸತೀಶ ಜಾರಕಿಹೊಳಿಯವರು ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿದ್ದಾರೆ. ಈಗ ಆಳುತ್ತಿರುವವರು ದೇಶವನ್ನು ತಪ್ಪು ಗುರಿಗಳತ್ತಾ ಸಾಗಿಸುತಿದ್ದಾರೆ. ಜನತೆಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಗಳನ್ನು ನಿರಾಕರಿಸಲಾಗುತಿದೆ. ನಮ್ಮೊಳಗಿನ ಬಹುತ್ವವನ್ನು ಹತ್ತಿಕ್ಕಲಾಗುತಿದೆ. ಕೇಂದ್ರದ ವಿರುದ್ಧ ಯಶಸ್ಸುಗಳಿಸಿದ ರೈತ ಹೋರಾಟ ನಮ್ಮೆಲ್ಲಾ ಚಳುವಳಿಗಳಿಗೆ ಮಾದರಿಯಾಗಬೇಕು. ಬಂಧುತ್ವ ಬಲಗೊಂಡರೆ ಮಾತ್ರ ದೇಶ ಅಭಿವೃದ್ಧಿಯ ಕಡೆಗೆ ಸಾಗಲಿದೆ. ನಾಡಿನ ಜನಚಳುವಳಿಗಳ ಜೊತೆಗೆ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದರು.
ಹರಿಹರದ ಶಾಸಕರಾದ ಎಸ್. ರಾಮಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿಭಾಗೀಯ ಸಂಚಾಲಕರುಗಳಾದ ಕೆ.ಎಸ್.ಸತೀಶ ಕುಮಾರ, ಇರ್ಫಾನ್ ಮುದಗಲ್, ತೋಳಿ ಭರಮಣ್ಣ, ಜಿಲ್ಲಾ ಸಂಚಾಲಕರುಗಳಾದ ಮಾಡಾಳ್ ಶಿವಕುಮಾರ್, ಪ್ರಕಾಶ್ ಹಾದಿಮನಿ, ಅಂಜಿನಪ್ಪ ಚಿತ್ರದುರ್ಗ, ಸಂಗಮೇಶ ಶಿವಮೊಗ್ಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹತ್ತು ಜಿಲ್ಲೆಗಳ ಶಿಬಿರಾರ್ಥಿಗಳು ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.