ಹೊನ್ನಾಳಿ : ಕೊಡತಾಳು, ತೀರ್ಥರಾಮೇಶ್ವರ ಹಾಗೂ ಗಡ್ಡೇರಾಮೇಶ್ವರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದು ಈಗಾಗಲೇ ಡಿಪಿಆರ್ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೊಡತಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಣಿವೆ ವೀರಭದ್ರೇಶ್ವರ ದೇವಾಲಯ ಪ್ರವೇಶ ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ದೇವಾಲಯಗಳು ನೆಮ್ಮದಿಯ ಸ್ಥಳಗಳಾಗಿವೆ ಎಂದ ರೇಣುಕಾಚಾರ್ಯ, ಈ ಹಿಂದೆ ಕಣಿವೆ ವೀರಭದ್ರೇಶ್ವರ ದೇವಾಲಯದಲ್ಲಿ ಬೋಜನಾಲಯಕ್ಕೆ ಐದು ಲಕ್ಷ ಹಾಗೂ ದೇವಾಲಯಕ್ಕೆ ಮೂರು ಲಕ್ಷ ನೀಡಿದ್ದೇ ಎಂದರು.
ಕೊಡತಾಳು, ತೀರ್ಥರಾಮೇಶ್ವರ, ಗಡ್ಡೆರಾಮೇಶ್ವರಗಳನ್ನು ಪ್ರವಾಸಿ ಸ್ಥಳಗಳಾಗಿ ಮಾಡಲು ನಿರ್ಧರಿಸಿದ್ದು ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು.
ದೇವಾಲಯಕ್ಕೆ ಹೋಗುವ ರಸ್ತೆ ಹಾಳಾಗಿದ್ದು ರಸ್ತೆ ಹಾಕಿಸಿಕೊಡುವಂತೆ ದೇವಾಲಯ ಕಮಿಟಿಯವರು ಮನವಿ ಮಾಡಿದ್ದು ಒಂದು ಕೋಟಿ ಹಣ ಹಾಕಲಾಗಿದೆ ಎಂದ ರೇಣುಕಾಚಾರ್ಯ, ದೇವಾಲಯಕ್ಕೆ ತೆರಳುವ ರಸ್ತೆ ಡಾಂಬರ್ ರಸ್ತೆ ಅಥವಾ ಸಿಸಿ ರಸ್ತೆ ಮಾಡ ಬೇಕೆ ಎಂದು ದೇವಾಲಯದ ಕಮಿಟಿಯವರು ನಿರ್ಧರಿಸಿ ಹೇಳಿದರೇ ಮತ್ತಷ್ಟು ಹಣ ಹಾಕುವುದಾಗಿ ಹೇಳಿದರು.
ಸವಳಂಗ – ಕೊಡತಾಳು ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದು ಗ್ರಾಮಸ್ಥರು ಕೆರೆಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದು ಇದೀಗ ರಸ್ತೆ ಅಗಲೀಕರಣ ಮಾಡಿ ತಡೆಗೋಡೆ ನಿರ್ಮಾಣ ಮಾಡಲು ನಾಲ್ಕು ಕೋಟಿ ಅನುದಾನ ಹಾಕಲಾಗಿದೆ ಎಂದರು.
ಕೊಡತಾಳು ಗ್ರಾಮವನ್ನು ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿ 40 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ದಿ ಮಾಡಿದ್ದು ಸೇವಾಲಾಲ್ ಸಾಂಸ್ಕøತಿಕ ಕೇಂದ್ರಕ್ಕೆ 10 ಲಕ್ಷ ಹಣ ಹಾಕಲಾಗಿದೆ ಎಂದರು.
ಈಗಾಗಲೇ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸಲು 518 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಸದ್ಯದರಲ್ಲೇ ಅವಳಿ ತಾಲೂಕಿನ ಕೆರೆಗಳಿಗೆ ಕೆಲವೇ ದಿನಗಳಲ್ಲಿ ನೀರು ಹರಿಯಲಿದೆ ಎಂದರು.
ಅಷ್ಟೇ ಅಲ್ಲದೇ ಫಲವನಹಳ್ಳಿ ಏತ ನೀರಾವರಿ ಯೋಜನೆಗೆ 83 ಕೋಟಿ ಅನುದಾನ ಬಿಡುಗಡೆಯಾಗಿದ್ದು ಸದ್ಯದರಲ್ಲೇ ಟೆಂಡರ್ ಪ್ರಕ್ರಿಯೆ ನಡೆದು ಅವಳಿ ಈ ಭಾಗದ ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದರು.
ಈ ಸಂದರ್ಭ ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ, ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ, ಗಿರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಸೇರಿದಂತೆ ದೇವಾಲಯದ ಕಮಿಟಿಯರು, ಗ್ರಾಮಸ್ಥರಿದ್ದರು.