ದಾವಣಗೆರೆ:ದಾವಣಗೆರೆ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣ ಬಾಡಿಗೆ ದರವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಇಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಇಂದು ಬೆಳಿಗ್ಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಕ್ರೀಡಾಪಟುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ದರವನ್ನು ಹತ್ತುಪಟ್ಟು ಹೆಚ್ಚಳ ಮಾಡಿರುವುದು ಖಂಡನೀಯವೆಂದರು.

ದಾವಣಗೆರೆ ನಗರಸಭೆ ವ್ಯಾಪ್ತಿಯಲ್ಲಿದ್ದ ಕ್ರೀಡಾಂಗಣವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಅಭಿವೃದ್ಧಿಯ ದೃಷ್ಟಿಯಿಂದ ವರ್ಗಾಯಿಸಿದ್ದರೂ ಸಹ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಕನಿಷ್ಠ ಮೂಲಸೌಲಭ್ಯಗಳಿಲ್ಲದೇ ಕ್ರೀಡಾಪಟುಗಳಿಗೆ ತೊಂದರೆ ಆಗಿದೆ ಎಂದರು.

ಕ್ರೀಡಾಂಗಣದಲ್ಲಿ ಲೈಟ್ ವ್ಯವಸ್ಥೆ ಇಲ್ಲ ಕ್ರೀಡಾಪಟುಗಳಿಗೆ ಬಾತ್ ರೂಮ್ ವ್ಯವಸ್ಥೆಯಿಲ್ಲ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಆದರೆ ದಿನವೊಂದಕ್ಕೆ 750 ರೂ ಇದ್ದ ಬಾಡಿಗೆ ದರವನ್ನು ಈಗ 7500 ರೂ.ಗೆ ಹೆಚ್ಚಿಸಲು ಹೊರಟಿರುವ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಿಂದ ಕೊರೊನಾದಿಂದಾಗಿ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಬರುತ್ತಿಲ್ಲ. ಅನೇಕ ಕ್ರೀಡಾ ಚಟುವಟಿಕೆಗಳು ನಡೆಯುತ್ತಿಲ್ಲ. ಇಂತಹ ಸಮಯದಲ್ಲಿ ಇಲಾಖೆಯು ಬಾಡಿಗೆದರವನ್ನು ಹೆಚ್ಚಿಸುವ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕ್ರೀಡಾ ತರಬೇತುದಾರರಾದ ಎಲ್.ಎಂ.ಪ್ರಕಾಶ್, ಗೋಪಾಲಕೃಷ್ಣ, ಸಿರಿಗೆರೆ ಉಮೇಶ್, ತಿಮ್ಮೇಶ್, ಕೇರಂ ಗಣೇಶ್, ಸುನೀಲ್ ಗುಂಡ, ಯುವರಾಜ್, ಗೋಪಾಲ್ ಅಂತು, ಕರಿಬಸಪ್ಪ, ಆರೋಗ್ಯಸ್ವಾಮಿ, ಬಸವರಾಜ್, ಪ್ರವೀಣ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *