ಹೊನ್ನಾಳಿ:
ಗ್ರಾಮ ಒನ್ ಕೇಂದ್ರ ಜನಸ್ನೇಹಿ ಆಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಗ್ರಾಮ ಒನ್ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ, ಸೇವಾ ಕಾರ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸುವ ಉದ್ದೇಶದಿಂದ ಸರಕಾರ ಗ್ರಾಪಂ ಕೇಂದ್ರಗಳ ವ್ಯಾಪ್ತಿಯಲ್ಲಿ ಸರಕಾರಿ ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಸದುದ್ದೇಶ ಸಾಕಾರಗೊಳಿಸುವುದು ಎಲ್ಲ ಹಂತಗಳ ಅಧಿಕಾರಿಗಳು-ಸಿಬ್ಬಂದಿ, ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಗ್ರಾಮ ಒನ್ ಕೇಂದ್ರಗಳ ಯಶಸ್ವಿ ಕಾರ್ಯನಿರ್ವಹಣೆಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ. ಸರಕಾರದ ಎಲ್ಲಾ ಸೇವೆಗಳೂ, ಬ್ಯಾಂಕ್, ವಿವಿಧ ಕಚೇರಿಗಳು ಮೊಬೈಲ್ ನೆಟ್ವರ್ಕ್ ಮತ್ತು ಸರ್ವರ್ ಕ್ಷಮತೆ ಅವಲಂಬಿಸಿರುವ ಹಿನ್ನೆಲೆಯಲ್ಲಿ ಆಗಾಗ ಈ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ವರ್ ತೊಂದರೆ ಆಗದಂತೆ ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಎಚ್.ಜೆ. ರಶ್ಮಿ ಹಾಲೇಶ್, ಕುಂದೂರು ವೃತ್ತದ ಉಪ ತಹಸೀಲ್ದಾರ್ ಮಂಜುನಾಥ್ ಕೆ.ಇಂಗಳಗುಂದಿ, ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ದೊಡ್ಡೇಶ್, ಗೊಲ್ಲರಹಳ್ಳಿ ಗ್ರಾಮದ ಗ್ರಾಮ ಒನ್ ಕೇಂದ್ರದ ನಿರ್ವಾಹಕ ಹಳೇದೇವರಹೊನ್ನಾಳಿ ಜಿ.ಎಸ್. ಶ್ರೀಕಾಂತ್ ಇತರರು ಇದ್ದರು.