ಹೊನ್ನಾಳಿ,16: ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದ ಸತ್ಪ್ರಜೆಗಳನ್ನಾಗಿಸುವ ಮೂಲಕ ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್ ಹೇಳಿದರು.
ಇಲ್ಲಿನ ಟಿ.ಬಿ. ವೃತ್ತದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆಯದ ಕಾರಣ ಈ ಬಾರಿ ಬೇಸಿಗೆಯ ರಜೆಯನ್ನು ಕಡಿತಗೊಳಿಸಲಾಗಿದೆ. ಜೂನ್ ಒಂದರಿಂದ ಶಾಲೆ ಪ್ರಾರಂಭಿಸಬೇಕು ಎಂದು ಕೆಲವೆಡೆ ಒತ್ತಡ ಇತ್ತು. ಆದರೆ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಮೇ 16ರಿಂದಲೇ ಶಾಲೆಗಳನ್ನು ತೆರೆಯಲು ನಿರ್ಧರಿಸಿ, ಆದೇಶ ಹೊರಡಿಸಿದರು. ಹಾಗಾಗಿ, ಸೋಮವಾರದಿಂದಲೇ ಶಾಲೆಗಳು ಪ್ರಾರಂಭವಾಗಿದ್ದು, ಅಧಿಕಾರಿಗಳು-ಶಿಕ್ಷಕರು ಮೇ 15ರ ಭಾನುವಾರದಂದೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇಂದು ಶಾಲೆಗಳು ನಿರಾತಂಕವಾಗಿ ಪ್ರಾರಂಭವಾಗಿವೆ ಎಂದು ತಿಳಿಸಿದರು.
ಕಲಿಕಾ ಚೇತರಿಕೆ:
ಕೋವಿಡ್-19ರ ಹಿನ್ನೆಲೆಯಲ್ಲಿ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿ ಶೈಕ್ಷಣಿಕ ಹಿನ್ನಡೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಕಲಿಕಾ ಸಾಮಥ್ರ್ಯದ ದೃಷ್ಟಿಯಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರು ಕಲಿಕಾ ಪ್ರಗತಿಸಿ ಸಾಧಿಸುವ ನಿಟ್ಟಿನಲ್ಲಿ ಈ ವರ್ಷದಿಂದ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಶಿಕ್ಷಕರಿಗೆ ಕಲಿಕಾ ಕೈಪಿಡಿ ನೀಡಿ ಆ ಮೂಲಕ ಮಕ್ಕಳಿಗೆ ಅಭ್ಯಾಸ ಮಾಡಿಸಲಾಗುವುದು. ಅಲ್ಲದೇ, ಈ ಬಾರಿ ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಡಿಡಿಪಿಐ ಹಾಗೂ ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮರ್ಪಕವಾಗಿ ಕಲಿಕಾ ಪ್ರಕ್ರಿಯೆ ನಡೆಸಲಾಗುವುದು ಎಂದು ವಿವರಿಸಿದರು.
ದೈಹಿಕ ಶಿಕ್ಷಣಾಧಿಕಾರಿ ಮಹೇಶ್ವರಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಾಸಡಿ ನಾಗರಾಜ್, ಪ್ರಭಾರ ಮುಖ್ಯ ಶಿಕ್ಷಕಿ ಸರೋಜಮ್ಮ, ಶಿಕ್ಷಕರಾದ ಜಿ. ಕೊಟ್ರೇಶ್, ವಾಣಿ ರಂಗನಾಥ್, ರೇಖಾ ಇತರರು ಇದ್ದರು.