ಹೊನ್ನಾಳಿ: ಪ್ರತಿ ದಿನವು ಮಗುವಿನ ಕಲಿಕೆಯು ನಡೆಯುತ್ತಿರಬೇಕು. ಹೊಸತನ್ನು ಕಲಿಯುವ ಮೂಲಕ ಮಗು ಎಂದರೆ ನಾಳೆ ಅಲ್ಲ ಇವತ್ತು ಎಂಬುದನ್ನು ನಾವು ಅರಿತಿರಬೇಕು ಎಂದು ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಎಚ್.ಪಿ ರಾಜ್ ಕುಮಾರ್ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಕಾಂಪೌಡ್, ನೀರಿನ ಸಿಂಕ್, ನೂತನ ನೀರಿನ ಟ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಗುವಿನ ಮನಸ್ಸು , ದೇಹ ಇಂದೇ ರೂಪಗೊಳ್ಳುತ್ತಿರುತ್ತದೆ. ಅದನ್ನು ನಾವು ಮನಗಾಣಬೇಕು. ಮಗು ಏನೇ ಕೇಳಿದರೆ ನಾಳೆ ಎಂದು ಉತ್ತರಿಸದೆ ಆ ಕ್ಷಣವೇ ಅದರ ಕುತೂಹಲವನ್ನು ತಣಿಸಬೇಕು. ಆಗ ಮಾತ್ರ ನಾವು ದೇಶಕ್ಕೆ ಅತ್ಯುತ್ತಮ ನಾಗರೀಕರನ್ನು ನೀಡಲು ಸಾಧ್ಯ ಎಂದರು.
ಹೊನ್ನಾಳಿ ಕಮಾನು ಸೇತುವೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಬೇಕು. ಮಕ್ಕಳ ಎದುರು ನಾವು ಏನು ಮಾಡುತ್ತೇವೆಯೋ ಮಗು ಅದನ್ನು ಬೇಗ ಕಲಿತು ಬಿಡುತ್ತದೆ. ಆದ್ದರಿಂದ ಮಗುವಿನ ಮುಂದೆ ನಾವು ಮಾದರಿಯಾಗಿರಬೇಕು. ಆಗ ಮಾತ್ರ ಅವರಲ್ಲಿ ಪ್ರಾಮಾಣಿಕತೆಯು ನೆಲೆಯೂರುವಂತೆ ಮಾಡಬಹುದು ಎಂದರು.
ಸಂಸ್ಥೆಯ ನೂತನ ಸದಸ್ಯ ಕೆ.ಎಸ್ ಮೋಹನ್ ಮಾತನಾಡಿ, ಕನಸು ಕಾಣಬೇಕು. ಈ ಸಂಸ್ಥೆ ಆ ಕನಸನ್ನು ನನಸು ಮಾಡಲು ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಚ್. ಲಿಂಗಯ್ಯ, ಖಜಾಂಚಿ ಕೆ.ಸೋಮಶೇಖರಪ್ಪ, ಸಹ ಕಾರ್ಯದರ್ಶಿ ಕೆ.ಗಣೇಶ್, ನಿರ್ದೇಶಕರಾದ ಹಾಲೇಶ್ ಕುಂಕೋದ್, ಅರುಣ್ ಕುಮಾರ್, ಡಾ.ಮಹ ದೇವ ದೇಶಿ, ರೂಪ ಕರಿಸಿದ್ದಪ್ಪ, ಡಾ. ಶಕುಂತಲಾ ರಾಜ್ ಕುಮಾರ್, ಕೆ.ವಿ ಪ್ರಸನ್ನ, ನಂದೀಶಣ್ಣ, ಎಚ್.ಎ ಹುಡೇದ್, ಸುರೇಶ್ ಶೇಠ್, ಪ್ರಕಾಶ್ ಹೆಬ್ಬಾರ್, ಡಾ.ಲಿಂಗರಾಜ್, ನಾಮ ದೇವ್, ಅಂದಾನಿ ನೀಲಕಂಠಪ್ಪ, ಬೈರನಹಳ್ಳಿ ಬಸವರಾಜಪ್ಪ ಇದ್ದರು.