ಹೊನ್ನಾಳಿ, ನ್ಯಾಮತಿ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಭತ್ತ, ಅಡಕೆ, ಬಾಳೆ, ಮೆಕ್ಕೆಜೋಳ ಮತ್ತಿತರ ಬೆಳೆಗಳು ಹಾಳಾಗಿದ್ದು, ಹಾನಿ ಅನುಭವಿಸಿದ ರೈತರಿಗೆ ಸರಕಾರ ಶೀಘ್ರದಲ್ಲೇ ಪರಿಹಾರ ಒದಗಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದರಗಡ್ಡೆ ಬಿ.ಎಚ್. ಜಯಪ್ಪ ಒತ್ತಾಯಿಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ನಡೆದ ಮುಂಗಾರು ಹಂಗಾಮು ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಮಳೆ-ಗಾಳಿಯಿಂದಾಗಿ ಭತ್ತದ ಬೆಳೆ ನೆಲಕಚ್ಚಿದೆ. ಅಡಕೆ ಮರಗಳು ಬುಡಮೇಲಾಗಿ ಬಿದ್ದಿವೆ. ಬಾಳೆ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ತಕ್ಷಣ ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ಮಾತನಾಡಿ, ಮಳೆ ಹಾನಿ ಪ್ರದೇಶಗಳಿಗೆ ತಹಸೀಲ್ದಾರರ ಜೊತೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಬೆಳೆ ಹಾನಿ ಬಗ್ಗೆ ಎಲ್ಲಾ ಹಂತಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ರವಾನಿಸಲಾಗುವುದು ಎಂದು ಹೇಳಿದರು.
ಈ ಬಾರಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿದೆ. ಕೆಲ ಬೆಳೆಗಳಿಗೆ ಹಾನಿಯಾಗುತ್ತಿದೆ. ಆದರೆ, ಅಡಕೆ ತೋಟಗಳು ಜಲಸಮೃದ್ಧಿ ಆಗಿವೆ. ಇದು ಸಂತಸದ ಸಂಗತಿ. ಮುಂಗಾರು ಬಿತ್ತನೆಗೆ ರೈತರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇವೆ. ರೈತರು ನಿರಾತಂಕವಾಗಿ ಬಿತ್ತನೆ ಕಾರ್ಯ ನಡೆಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕೃಷಿ ಸಂಪರ್ಕ ಕೇಂದ್ರಗಳು ಇಲ್ಲವೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ವಿವರಿಸಿದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷೆ ಆರುಂಡಿ ಎಲ್. ಜಯಮ್ಮ, ನಿರ್ದೇಶಕರಾದ ಜಿ.ಎಂ. ಸೋಮಶೇಖರಪ್ಪ, ನರಸಗೊಂಡನಹಳ್ಳಿ ಎನ್.ಪಿ. ಕೃಷ್ಣಮೂರ್ತಿ, ಉಜ್ಜನೀಪುರದ ಜಿ.ಆರ್. ಬಸವರಾಜ್, ಜಿಲ್ಲಾ ಪ್ರತಿನಿಧಿ ಚಿಕ್ಕಹಾಲಿವಾಣದ ಎಲ್. ರುದ್ರಾನಾಯ್ಕ, ಕ್ಷೇತ್ರ ತಾಂತ್ರಿಕ ವ್ಯವಸ್ಥಾಪಕ ಟಿ.ಬಿ. ಸಚಿನ್, ಅರಬಗಟ್ಟೆ ಗ್ರಾಮದ ರೈತ ಉತ್ಪಾದಕರ ಒಕ್ಕೂಟದ ಎಂ.ಬಿ. ಸುಷ್ಮಾ ಇತರರು ಇದ್ದರು.