ಹೊನ್ನಾಳಿ:
ಪಟ್ಟಣದ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ.ಬಸರಗಿ ಬುಧವಾರ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಸಿಪಿಐ ಟಿ.ವಿ. ದೇವರಾಜ್ ಇತರರು ಠಾಣೆಯ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಿದರು. ವೀಕ್ಷಿಸಿದ ರಾಮಗೊಂಡ ಬಿ.ಬಸರಗಿ, ಚನ್ನಗಿರಿ-ಹೊನ್ನಾಳಿ ಡಿವೈಎಸ್ಪಿ ಡಾ.ಕೆ.ಎಂ. ಸಂತೋಷ್, ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್, ಪಿಎಸ್ಸೈ ಬಸನಗೌಡ ಬಿರಾದಾರ, ಎಎಸ್ಸೈಗಳು ಹಾಗೂ ಪೊಲೀಸ್ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ನಿರ್ಮಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸಿಪಿಐ ಟಿ.ವಿ. ದೇವರಾಜ್ ಅವರಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ.ಬಸರಗಿ ಸೂಚಿಸಿದರು.
ಹೊನ್ನಾಳಿ ಪೊಲೀಸ್ ಠಾಣೆಯ ವಸತಿಗೃಹ ಸಂಕೀರ್ಣಕ್ಕೆ ಆವರಣ ಗೋಡೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಸಿಪಿಐ ಟಿ.ವಿ. ದೇವರಾಜ್ ಮಾತನಾಡಿ, ತಾಲೂಕಿನ ಕೂಲಂಬಿ ಗ್ರಾಮ, ನ್ಯಾಮತಿ ತಾಲೂಕಿನ ಸವಳಂಗ ಮತ್ತು ಚೀಲೂರು ಗ್ರಾಮಗಳಲ್ಲಿ ಸರಕಾರದಿಂದ ಪೊಲೀಸ್ ಹೊರ ಠಾಣೆಗಳು ಮಂಜೂರಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಾಯ ಆಗುತ್ತಿದೆ. ಆದರೆ, ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆಯನ್ನು ಸರಕಾರ ಮಂಜೂರು ಮಾಡಿಲ್ಲ. ನೀರಾವರಿ ಇಲಾಖೆಯ ಕಟ್ಟಡವೊಂದರಲ್ಲಿ ತಾತ್ಕಾಲಿಕ ಪೊಲೀಸ್ ಹೊರ ಠಾಣೆ ಸ್ಥಾಪಿಸಲಾಗಿದೆ. ನಮ್ಮ ಸಿಬ್ಬಂದಿ ಅಲ್ಲಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಸ್ವೆಹಳ್ಳಿ ಗ್ರಾಮದಲ್ಲಿ ನೂತನ ಪೊಲೀಸ್ ಹೊರ ಠಾಣೆ ಮಂಜೂರು ಮಾಡಬೇಕು ಎಂದು ಶೀಘ್ರದಲ್ಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಚನ್ನಗಿರಿ-ಹೊನ್ನಾಳಿ ಡಿವೈಎಸ್ಪಿ ಡಾ.ಕೆ.ಎಂ. ಸಂತೋಷ್, ಸಿಪಿಐ ಟಿ.ವಿ. ದೇವರಾಜ್ ಇದ್ದರು.