ಹೊನ್ನಾಳಿ:
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊಯಿಲಿಗೆ ಬಂದಿರುವ ಭತ್ತದ ಬೆಳೆ ಸೋಮವಾರ, ಮಂಗಳವಾರ ರಾತ್ರಿ ಸುರಿದ ಭಾರೀ ಮಳೆ, ಬೀಸಿದ ಬಿರುಗಾಳಿಯಿಂದಾಗಿ ನೆಲಕಚ್ಚಿದೆ. ಅಕಾಲಿಕ ಮಳೆಯಿಂದಾಗಿ ತಮ್ಮ ಕಣ್ಣ ಮುಂದೆಯೇ ಬೆಳೆ ನೀರು ಪಾಲಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದು ಎಂಬಂತಾಗಿದೆ. ಸಹಸ್ರಾರು ರೂ.ಗಳನ್ನು ವ್ಯಯಿಸಿ ಬೆಳೆ ಬೆಳೆದಿದ್ದ ರೈತರು ದಿಕ್ಕುತೋಚದಂತಾಗಿದ್ದಾರೆ.
ಮಳೆಯಿಂದ ನೆಲಕಚ್ಚಿರುವ ತಾಲೂಕಿನ ಬನ್ನಿಕೋಡು ಗ್ರಾಮದ ಬಸವನಗೌಡ ಅವರ ಭತ್ತದ ಗದ್ದೆಗೆ ತಹಸೀಲ್ದಾರ್ ಎಚ್.ಜೆ. ರಶ್ಮಿ ಹಾಲೇಶ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಕುಂದೂರು ಸರ್ಕಲ್‍ನ ರಾಜಸ್ವ ನಿರೀಕ್ಷಕ ಬಿ.ಎಂ. ರಮೇಶ್, ಗ್ರಾಮ ಲೆಕ್ಕಾಧಿಕಾರಿ ಚಂದ್ರಕಲಾ, ಕುಂದೂರು ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ರಾಜ್‍ಕುಮಾರ್ ಕುಚನೂರು ಇತರರು ಇದ್ದರು.