ಸಾಸ್ವೆಹಳ್ಳಿ: ಹೋಬಳಿಯ ಹನುಮನಹಳ್ಳಿ ಸಮೀಪದ ಗುಡ್ಡದಲ್ಲಿ ನೆಲೆಸಿರುವ ಕುರು ಬಸವೇಶ್ವರ ಸ್ವಾಮಿಯ ಪೂಜಾ ವೃತಾಚರಣೆಗೆ ಸೋಮವಾರ ತೆರೆ ಬಿದ್ದಿತು.
ಗ್ರಾಮದ ಎಲ್ಲಾ ಸಮುದಾಯದವರು ಸೇರಿ ಗ್ರಾಮ ದೇವತೆ ಬಸವೇಶ್ವರ, ಬೇಡರ ರಂಗಪ್ಪ ಸ್ವಾಮಿ ಉತ್ಸವ ಮೂರ್ತಿಗಳನ್ನು ಹೊತ್ತು. ವೈಶಾಖ ಮಾಸದ ಕೊನೆಯ ಮೂರು ವಾರವೂ ಗುಡ್ಡದಲ್ಲಿ ನೆಲೆಸಿರುವ ಕುರು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆಯ ವೃತಾಚರಣೆಯನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ.
ಕುರು ಬಸವೇಶ್ವರ ಸ್ವಾಮಿಗೆ ಕುರ ಬಂದಾಗ ಮೂರು ಸೋಮವಾರಗಳಂದು ಪೂಜೆಯನ್ನು ಸಲ್ಲಿಸಿದರೆ ಕುರ ಮಾಯುತ್ತದೆ ಎಂಬ ನಂಬಿಗೆ ಸುತ್ತಮುತ್ತಲ ಗ್ರಾಮದ ಜನರಲ್ಲಿದೆ. ಹಾಗಾಗಿ ಈ ದೇವಸ್ಥಾನಕ್ಕೆ ಕುರ ಬಂದವರು ಬಂದು ಪೂಜೆಯನ್ನು ಸಲ್ಲಿಸುತ್ತಾರೆ. ದೇವರಲ್ಲಿ ಬಂದು ಬೇಡಿದರೆ ಕಷ್ಟಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎನ್ನುತ್ತಾರೆ ಗಿರೀಶ್ ಎಂ ನಾಡಿಗ್.
ನಾವು ಸಣ್ಣವರಿದ್ದಾಗ ದೇವಸ್ಥಾನಕ್ಕೆ ನಡೆದೇ ಹೋಗಬೇಕಾಗಿತ್ತು. ಈಗ ದೇವಸ್ಥಾನದವರೆಗೆ ರಸ್ತೆಯಾಗಿದೆ. ಅಲ್ಲಿಗೆ ವಾಹನಗಳಿಂದ ಹೋಗಿ ಪೂಜೆಯನ್ನು ಸಲ್ಲಿಸಿ ನಮ್ಮ ಇಷ್ಟಾರ್ಥ ಈಡೇರಿಕೆಗೆ ಬೇಡಬಹುದು ಎನ್ನುತ್ತಾರೆ ಅಭಿಷೇಕ್.
ವೃತಾಚರಣೆಯ ಮೂರನೇ ಸೋಮವಾರದಂದು ಗ್ರಾಮದಲ್ಲಿ ಧಾನ್ಯಗಳನ್ನು ಸಂಗ್ರಹಿಸಿ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಸಾಸ್ವೆಹಳ್ಳಿ ಸಮೀಪದ ಹನುಮನಹಳ್ಳಿ ಕುರಬಸವೇಶ್ವರ ಪರೋವ ಉತ್ಸವದಲ್ಲಿ ಪ್ರಸಾದ ಸ್ವೀಕರಿಸುತ್ತಿರುವ ಭಕ್ತರು.