ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್‍ಲಾಲ್ ನೆಹರು ಅವರ 58ನೇ ಪುಣ್ಯಸ್ಮರಣೆಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಸಚಿವರಾದ ಶಿವಮೂರ್ತಿ ನಾಯ್ಕ ಮಾತಮಾಡಿ ಕಾಂಗ್ರೆಸ್ ಪಕ್ಷ ಮತ್ತು ದೇಶಕ್ಕೆ ಭರವಸೆ ನೀಡಿದ ಕುಟುಂಬವಾಗಿರುವ ನೆಹರು ಅವರಿಂದಾಗಿ ದೇಶ ಉನ್ನತ ಮಟ್ಟಕ್ಕೆ ಬೆಳೆದಿತ್ತು. ಇಂದು ಆಶ್ರಯದಲ್ಲಿರುವ ಕೇಂದ್ರ ಸರ್ಕಾರ ನೆಹರು ಅವರ ಬಗ್ಗೆ ಇಲ್ಲದ ಅಪಪ್ರಚಾರ ನಡೆಸುತ್ತಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವೇಳೆ ದೇಶದಲ್ಲಿ ನಾನಾ ಪ್ರಾಂತ್ಯಗಳಿದ್ದು, ಅವುಗಳೆಲ್ಲವನ್ನು ಒಟ್ಟೂಗೂಡಿಸಿ ದೇಶವನ್ನು ಪ್ರಜಾಪ್ರಭುತ್ವದಡಿ ನಿರ್ಮಿಸಿದ ಕೀರ್ತಿ ನೆಹರೂ ಅವರಿಗೆ ಸಲ್ಲಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಪೂರ್ವ ಮತ್ತು ಆನಂತರ ದೇಶ ಹೇಗಿತ್ತು ಎಂಬುದನ್ನು ಅವಲೋಕಿಸಬೇಕಿದ್ದು, ನೆಹರು ಅವರು ದೇಶವನ್ನು ಭದ್ರತೆಯ ರಾಷ್ಟ್ರವನ್ನಾಗಿಸಿದರೆ, ಇಂದು ದೇಶವನ್ನು ಅಭದ್ರತೆಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಮೈನುದ್ದೀನ್ ಮಾತನಾಡಿ ದೇಶದ ಉನ್ನತಿಗಾಗಿ ನೆಹರೂ ಅವರು ಅನೇಕ ದೈತ್ಯ ಸಂಸ್ಥೆಗಳನ್ನು ಹುಟ್ಟು ಹಾಕಿದರೆ ಇಂದು ಆ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಲು ಹೊರಟಿದೆ ಎಂದು ದೂರಿದರು.
ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ರಾಘವೇಂದ್ರ ಗೌಡ ಮಾತನಾಡಿ ಗಾಂಧಿ, ನೆಹರು ಅವರನ್ನು ತುಚ್ಚವಾಗಿ ಕಾಣುವ ಮೂಲಕ ಬಿಜೆಪಿಗರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿದ್ದು, ಬ್ರಿಟಿಷರ ದಾಸ್ಯ ಅನುಭವಿಸಿದ ಆರ್.ಎಸ್.ಎಸ್. ಇಂದು ದೇಶಭಕ್ತರಂತೆ ನಟಿಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಹರೀಶ್ ಕೆ.ಎಲ್.ಬಸಾಪುರ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ನೆಹರೂ ಸೇರಿದಂತೆ ಉತ್ತಮ ಪ್ರಧಾನಿಗಳನ್ನು ದೇಶಕ್ಕೆ ನೀಡಿದೆ. ಆದರೆ ಬಿಜೆಪಿ ನೆಹರೂ ಅಂತಹ ಅಭಿವೃದ್ಧಿ ದೂರದೃಷ್ಟಿಯುಳ್ಳ ಉತ್ತಮ ಪ್ರಧಾನಿ ಅವರ ಹೆಸರನ್ನು ಸಹ ಹೇಳಲು ಸಾಧ್ಯವಾಗದಂತಹ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ಕೂರಿಸಿದ್ದು, ಈ ದೇಶದ ಜನತೆ ಬಿಜೆಪಿಗರಿಂದ ಪಶ್ಚಾತ್ತಾಪ ಪಡುವ ಸ್ಥಿತಿ ದೂರವಿಲ್ಲ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ ದೇಶವನ್ನು ಪಂಚವಾರ್ಷಿಕ ಯೋಜನೆ ಮೂಲಕ ದೇಶದ ಭವಿಷ್ಯ ರೂಪಿಸಿದ ನೆಹರೂ ಅವರು ದೇಶಕ್ಕೆ ನೀಡಿದ ಕೊಡುಗೆ ಅನನ್ಯ. ಆದರೆ ಇಂದಿನ ಪ್ರಧಾನಿ 8 ವರ್ಷ ಆಳ್ವಿಕೆ ನಡೆಸಿ ದೇಶವನ್ನು ನೂರು ವರ್ಷ ಹಿಂದಕ್ಕೆ ಕೊಂಡೊಯ್ಯದರು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮಹ್ಮದ್ ಜಿಕ್ರಿಯಾ, ಆವರಗೆರೆ ಮಂಜುನಾಥ್, ಕತ್ತಲಗೆರೆ ಮಂಜುನಾಥಸ್ವಾಮಿ, ಹನುಮಂತ, ಎನ್‍ಎಸ್‍ಯುಐನ ಅಲಿ ರೆಹಮತ್, ಶ್ರೀಮತಿ ಮಂಗಳಮ್ಮ, ಶ್ರೀಮತಿ ಸುನೀತಾ ಭೀಮಣ್ಣ, ಶ್ರೀಮತಿ ಗೀತಾ ಚಂದ್ರಶೇಖರ್, ಶ್ರೀಮತಿ ರಾಜೇಶ್ವರಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *