ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶೆಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಗುರುವಾರ ಶುಕ್ರವಾರ ಎರಡು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ದೇವಿಯ ಜಾತ್ರಾ ಮಹೋತ್ಸವ ಬುಧವಾರದಿಂದಲೇ ಆರಂಭಗೊಂಡು ಅಂದು ಬೆಳಿಗ್ಗೆ ದೇವಿಯ ಶೀಲಾ ಮೂರ್ತಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಪುರೋಹಿತರು ನೆರವೇರಿಸಿದರು. ನಂತರ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಯಿತು.


ಗುರುವಾರ ರಾತ್ರಿ ಹುಲಿಗೆಮ್ಮ ದೇವಿಗೆ ಪ್ರತಿ ಮನೆಯಿಂದ ಹೆಣ್ಣುಮಕ್ಕಳು ಅರಿಶಿನ ಕುಂಕುಮ ಹುಡಿಹಕ್ಕಿಯನ್ನು ನೀಡಿ ದೇವಿಗೆ ಉಡಿಯಕ್ಕಿ ಶಾಸ್ತ್ರ ನೆರವೇರಿಸಿ ಮುತ್ತೈದೆಯರು ಜಾನಪದ ಸೊಗಡಿನ ಸೋಬಾನೆಯ ಪದಗಳನ್ನು ಹಾಡಿದರು. ಶುಕ್ರವಾರ ಬೆಳಗಿನ ಜಾವ ದೇವಿಯ ಕೆಂಡಾರ್ಚನೆಗೆ ದೇವಸ್ಥಾನದ ಆವರಣದಲ್ಲಿ ಶ್ರೀಗಂಧ, ಅರಳಿ, ಬಿಲ್ವಪತ್ರೆ ತ್ಯಾಗ ಸೇರಿದಂತೆ ವಿವಿಧ ಬಗೆಯ ಕಟ್ಟಿಗೆ ರಾಶಿ ಒಟ್ಟಿ, ಗ್ರಾಮದ ಮುತ್ತೈದೆಯರು ಗಂಗಾಜಲದ ಕೆಲುಗಳನ್ನು ಪೂಜಿಸಿ, ಚಂಡಮದ್ದಳೆ ವಾದ್ಯಗಳ ರಾಜಬೀದಿ ಮೆರವಣಿಗೆಯಲ್ಲಿ ಆಗಮಿಸಿ. ಕಟ್ಟಿಗೆ ರಾಶಿಗೆ ತುಪ್ಪ, ಕರ್ಪೂರ ಹಾಕಿ ರುದ್ರನನ್ನು ತೋರಿ ಕೆಂಡದ ರಾಶಿ ಮಾಡಲಾಯಿತು. ಮುತ್ತೈದೆಯರು ಹೊತ್ತು ತಂದ ಗಂಗಾ ಜಲದಲ್ಲಿ ಪಾಯಸವನ್ನು ಸಿದ್ಧತೆ ಮಾಡಲಾಯಿತು.
ನಂತರ ದೇವರ ಗಣ ಮಗ ದೇವಿಯ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಕೆಂಡವನ್ನು ತುಳಿದರು. ನಂತರ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಆಗಮಿಸಿ ಕೆಂಡದ ಕುಂಡಕ್ಕೆ ಕಾಯಿ ಒಡೆದು ಕೆಂಡ ತುಳಿದು ತಮ್ಮ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು. ಭಕ್ತರಿಗೆ ದೇವರ ಗಣ ಮಗ ಕುದಿಯುವ ಪಾಯಸದ ಪಾತ್ರೆಯಿಂದ ಸೌಟು ಬಳಸದೆ ಬರಿಗೈಯಲ್ಲಿ ಪಾಯಸವನ್ನು ಕೆಂಡ ತುಳಿದ ಭಕ್ತರಿಗೆ ಪ್ರಸಾದವಾಗಿ ನೀಡಿ ಪವಾಡ ಮೆರೆದರು. ದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಧಾನ ಅರ್ಚಕರಾದ ಲೋಹಿತ್ ಸ್ವಾಮಿ, ಹುಲಿಗೆಮ್ಮ ದೇವಿ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *