ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿ ನಾಯ್ಕ ರವರಿಗೆ ಅಭಿವೃದ್ಧಿಕಾರ್ಯಗಳು ಹಾಗೂ ಅವೈಜ್ಞಾನಿಕ ಕಾಮಗಾರಿಗಳು ಎಂದರೆ ಏನು ಎಂಬುದರ ವ್ಯತ್ಯಾಸವೇ ಗೊತ್ತಿಲ್ಲ ಎಂದೆನಿಸುತ್ತದೆ ಎಂಬುದಕ್ಕೆ ಪಾಲಿಕೆಯ ಮುಂಭಾಗದ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯೆ ಸಾಕ್ಷಿ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹರೀಶ್ ಕೆ.ಎಲ್ ಬಸಾಪುರ ಟೀಕಿಸಿದ್ದಾರೆ.
ಮೇಯರ್ ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸುವ ಭರದಲ್ಲಿ ದಾವಣಗೆರೆ ನಗರವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯದಲ್ಲಿಯೇ ಅತ್ಯುತ್ತಮ ನಗರವನ್ನಾಗಿಸಿದ್ದ ಎಸ್ಸೆಸ್ಸೆಂ ನಿರ್ಮಿಸಿದ್ದ ಯೋಜನೆಗಳನ್ನು, ಮಾಡಿದ್ದ ಸಿಸಿ ರಸ್ತೆಗಳನ್ನು ಟೀಕಿಸಿದ್ದ ಇವರಿಗೆ ತಮ್ಮ ಕಚೇರಿಯ ಕೂಗಳತೆ ದೂರದಲ್ಲಿರುವ ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯನ್ನು ತಮ್ಮ ಪಕ್ಷದ ನಾಯಕರುಗಳು ಎಷ್ಟು ಬಾರಿ ರಿಪೇರಿ ಮಾಡಿದ್ದರು ಹಾಗೂ ಸಾರ್ವಜನಿಕರ ಎಷ್ಟು ಹಣ ಖರ್ಚು ಮಾಡಿದ್ದರು ಎಂಬುದನ್ನು ಪರಿಶೀಲಿಸಿದರೆ ಅಭಿವೃದ್ಧಿ ಕಾರ್ಯಗಳ ಹಾಗೂ ಅವೈಜ್ಞಾನಿಕ ಕಾಮಗಾರಿಗಳ ವ್ಯತ್ಯಾಸ ಅರ್ಥವಾಗುತ್ತದೆ ಎಂದರು.
ತಮ್ಮ ಕ್ಷೇತ್ರಕ್ಕೆ ಹೋಗುವ ಡಿಸಿಎಂ ಟೌನ್ಶಿಪ್ ಬ್ರಿಡ್ಜ್, ಹದಡಿ ರಸ್ತೆಯ ನ್ಯಾಷನಲ್ ಹೈವೇ ಯಲ್ಲಿನ ಬ್ರಿಡ್ಜ್, ನೋಡಿದರೆ ಇವರ ನಾಯಕರ ಅವೈಜ್ಞಾನಿಕ ಕಾಮಗಾರಿಗಳಿಗೆ ಹಿಡಿದ ಕೈಗನ್ನಡಿಯಾಗಿದ್ದು, ಯಾವುದೇ ಯೋಜನೆಗಳನ್ನು ಒಂದೇ ಬಾರಿಗೆ ಉತ್ತಮವಾಗಿ ಮಾಡಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡದ ಹೆಮ್ಮೆ ಇವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಎಸ್ ಎಸ್ ಮಲ್ಲಿಕಾರ್ಜುನ್ ರವರು ತಮ್ಮ ಅವಧಿಯಲ್ಲಿ ನಗರದಲ್ಲಿ ಎಲ್ಲಾ ಕಡೆ ಸಿಸಿ ರಸ್ತೆ ಮಾಡಿಸಿದ್ದು, ಬಿಜೆಪಿ ನಾಯಕರುಗಳು ಅದರ ನಿರ್ವಹಣೆಯಲ್ಲಿಯು ಸಹ ಸೋತಿದ್ದು, ಇವರು ಮೊದಲು ರಸ್ತೆ ರಸ್ತೆಗಳ ನಡುವೆ ಇರುವ ಗುಂಡಿಗಳನ್ನು ಮುಚ್ಚಿಸುವ ಕಾರ್ಯವನ್ನಾದರು ಮಾಡಲಿ ಎಂದು ತಿಳಿಸಿದರು