ವೈದ್ಯರನ್ನು ದೇವರ ಸಮಾನ ಎಂದು ನೋಡುವ ದೇಶ
ನಮ್ಮದು ಹಾಗಾಗಿ ವೈದ್ಯ ವೃತ್ತಿಯಲ್ಲಿರುವವರು ದೇವರು
ಮೆಚ್ಚುವಂತೆ ಕೆಲಸ ಮಾಡಬೇಕು, ಸಿಜೇರಿಯನ್ ಹೆರಿಗೆಗೆ ಹೆಚ್ಚು
ಒಲವು ತೋರದೆ ಸಾಮಾನ್ಯ ಹೆರಿಗೆಗೆ ಹೆಚ್ಚು ಒತ್ತು ನೀಡಿ ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಆರೋಗ್ಯ
ಅಭಿಯಾನ ಕಾರ್ಯಕಾರಿ ಸಮಿತಿ ಸಭೆಯ ರಾಷ್ಟ್ರೀಯ ಆರೋಗ್ಯ
ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಪ್ರಗತಿ ಪರಿಶೀಲನೆ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಕಿಅಂಶಗಳ ಪ್ರಕಾರ ಸಿಸೇರಿಯನ್ ಹೆರಿಗೆಗಳ ಪ್ರಮಾಣ ಜಾಸ್ತಿ
ಇದೆ, ಸಾಮಾನ್ಯ ಹೆರಿಗೆ ಮಾಡಿಸಲು ಏಕೆ ಸಾಧ್ಯವಿಲ್ಲ? ಕೆಲ ಕ್ಲಿಷ್ಟಕರ
ಸಂದರ್ಭಗಳಲ್ಲಿ ಹೊರತುಪಡಿಸಿ ಹೆಚ್ಚು ಸಿಸೇರಿಯನ್ ಹೆರಿಗೆಗಳಿಗೆ
ಅವಕಾಶ ಬೇಡ ಎಂದರು.
ಈ ಹಿಂದಿನ ವರ್ಷಗಳಲ್ಲಿ ದಾವಣಗೆರೆ ಆರೋಗ್ಯ ಇಲಾಖೆಯ
ಕಾರ್ಯಪ್ರಗತಿ ನಂಬರ್ ಒನ್ ಸ್ಥಾನದಲ್ಲಿರುತಿತ್ತು, ನಂತರದ
ದಿನಗಳಲ್ಲಿ ಬರುಬರುತ್ತಾ ರ್ಯಾಂಕಿಂಗ್ನಲ್ಲಿ ಕೆಳಗಿನಿಂದ ನಾಲ್ಕೈದು
ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ, ಬಹಳ ಕ್ರಿಯಾಶೀಲ
ಅಧಿಕಾರಿಗಳು, ವೈದ್ಯರು ಜಿಲ್ಲೆಯಲ್ಲಿದ್ದೀರಿ ಕೆಲಸದ ಕಡೆ ಗಮನ
ನೀಡದೆ ಹೀಗಾಗಿದೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳದಿದ್ದರೆ
ಸಹಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲೆಯಲ್ಲಿ ಲಸಿಕಾಕರಣ ವೇಗ ಪಡೆದುಕೊಳ್ಳಬೇಕು,
ಪೋಲಿಯೋ ನಿರ್ಮೂಲನೆ ಈಗಾಗಲೇ ಆಗಿದ್ದು ದಢಾರ ರುಬೆಲ್ಲಾ
ನಿರ್ಮೂಲನೆಗೂ ಸರ್ಕಾರ ಶ್ರಮಿಸುತ್ತದ್ದು ಆರೋಗ್ಯ ಇಲಾಖೆ
ಸಿಬ್ಬಂದಿ ಕೈ ಜೋಡಿಸಬೇಕೆಂದರು ಹಾಗೂ ಶಾಲಾ ಲಸಿಕಾಕರಣ ಜೂನ್ 15
ರೊಳಗೆ ಮುಗಿಸಬೇಕೆಂದರು. ಶಿಶುಮರಣ
ತಗ್ಗಿಸುವುದರೊಂದಿಗೆ ಮಕ್ಕಳು ಗರ್ಭಿಣಿಯರು,
ವಯೋವೃದ್ದರ ಬಗೆಗೆ ಕಾಳಜಿ ಇರಲಿ ಎಂದರು..
ಡಾ. ನಟರಾಜು ಮಾಹಿತಿ ನೀಡಿ ಮಲೇರಿಯ ಮಾಸಾಚರಣೆ
ಆಚರಿಸಲಾಗುತ್ತಿದ್ದು, ಹಿಂದಿನ ವರ್ಷ ಮೂರು ಕೇಸ್ ದಾಖಲಾಗಿದ್ದು
ಬಿಟ್ಟರೆ ಈ ವರ್ಷ ಯಾವುದೇ ಮಲೇರಿಯಾ ಪ್ರಕರಣಗಳು
ಕಂಡುಬಂದಿಲ್ಲ ಎಂದರು.
ಇದೆ ವೇಳೆ ಮಲೇರಿಯ ವಿರೋಧಿ ಮಾಸಾಚರಣೆ-2022
ಬಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು
ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ.ಚನ್ನಪ್ಪ ಎ, ಜಿಲ್ಲಾ ಆರೋಗ್ಯಾಧಿಕಾರಿ ಡಾ,ನಾಗರಾಜ್, ಡಾ.ರಾಘವನ್,
ಆರ್ಸಿಹೆಚ್ ಡಾ. ಮೀನಾಕ್ಷಿ, ಎಸ್ಎಂಒ ಡಾ.ಶ್ರೀಧರ್ ಸೇರಿದಂತೆ ವಿವಿಧ
ಜಿಲ್ಲಾಮಟ್ಟದಬ ಆರೋಗ್ಯಾಧಿಕಾರಿಗಳು ಹಾಜರಿದ್ದರು.