ಸಾಸ್ವೇಹಳ್ಳಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಕೊನೆಯೇ ಇಲ್ಲಾ, ನಿರಂತವಾಗಿ ಅಭಿವೃದ್ದಿ ಕೆಲಸಗಳು ಅವಳಿ ತಾಲೂಕಿನಲ್ಲಿ ನಡೆಯುತ್ತಲೇ ಇರುತ್ತವೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸಾಸ್ವೇಹಳ್ಳಿ ಗ್ರಾಮದಲ್ಲಿ ಇದೇ ತಿಂಗಳ ಐದರಂದು ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬೃಹತ್ ಮತ್ತು ಮದ್ಯಮ ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆಯ ಪೂರ್ವ ಸಿದ್ದತೆಯನ್ನು ಅಧಿಕಾರಿಗಳು, ಮುಖಂಡರೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಮೂರುವರೆ ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಲಾಗಿದ್ದು ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದೂ ಕೊನೆ ಇಲ್ಲಾ ಎಂದರು.
ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡ ಬೇಕೆಂಬ ಹೆಬ್ಬಯಕೆ ನನ್ನದು ಎಂದ ಶಾಸಕರು ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಬೆನಕನಹಳ್ಳಿ ಸುತ್ತಮುತ್ತದ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರು ನೀಡುವ ಉದ್ದೇಶದಿಂದ 10 ಕೋಟಿ ವೆಚ್ಚದ ಕಾಮಗಾರಿ ಮಂಜೂರಾಗಿದ್ದು ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೇ ಎಂದ ಶಾಸಕರು, 59 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಎಲ್ಲಾ ಕೆರೆಗಳು ತುಂಬಲಿದೆ ಎಂದ ಶಾಸಕರು ಸಿಎಂ ಬಂದಾಗ ಇವುಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.
ನಾಳೆ ಸಚಿವತ್ರೇಯರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಹೋಗಲಾಗುವುದು ಎಂದ ಶಾಸಕರು, ಇದಕ್ಕಾಗಿ ಅದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ ಎಂದರು.
ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಉದ್ಘಾಟನೆ :
ಅಂದು ಬೆಳಗ್ಗೆ 10.30 ಬೆನಕನಹಳ್ಳಿ ಗ್ರಾಮಕ್ಕೆ ಆಗಮಿಸುವ ಸಚಿವರು, 2 ಕೋಟಿ ವೆಚ್ಚದಲ್ಲಿ ಸಿಸಿರಸ್ತೆ ಹಾಗೂ ಹೊಳೆಮೆಟ್ಟಿಲು ಕಾಮಗಾರಿ, 99 ಲಕ್ಷ ರೂಪಾಯಿ ವೆಚ್ಚದಲ್ಲಿ ಜಲಜೀವನ್ ಮೀಷನ್ ಕಾಮಗಾರಿ,17 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯವಿಲೇವಾರಿ ಘಟಕ,10.50 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾಕೊಠಡಿ ನಿರ್ಮಾಣ, ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಸೇರಿದಂತೆ ಒಟ್ಟು 3.34 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಂತರ 11 ಘಂಟೆಗೆ ಸಾಸ್ವೇಹಳ್ಳಿಯ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಗಮಿಸುವ ಸಚಿವತ್ರೇಯರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನರಸಿಂಹಸ್ವಾಮಿ ದೇವಾಲಯದ ಬಳಿ ತುಂಗಭದ್ರಾನದಿಗೆ ಹೊಳೆಮೆಟ್ಟಿಲು,ಕೂಡುರಸ್ತೆ ನಿರ್ಮಾಣ ಕಾಮಗಾರಿ, 90 ಲಕ್ಷ ರೂಪಾಯಿ ವೆಚ್ಚದಲ್ಲಿ ಆಂಜನೇಯ ದೇವಾಲಯದ ಬಳಿಯ ತುಂಗಭದ್ರಾ ನದಿಗೆ ಹೊಳೆಮಟ್ಟಿಲು ಮತ್ತು ಕೂಡುರಸ್ತೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ,1.50 ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಕಾಲೋನಿಯಲ್ಲಿ ಸಿಸಿ ರಸ್ತೆ,ಕಾಲೋನಿ ಅಭಿವೃದ್ದಿ ,ಕಂಪೌಂಡ್ ನಿರ್ಮಾಣ ಕಾಮಗಾರಿ,1.12 ಕೋಟಿ ರೂಪಾಯಿ ವೆಚ್ಚದಲ್ಲಿ ಜಲಜೀವನ್ ಮೀಷನ್ ಕಾಮಗಾರಿ, 12 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯ ಕಾಮಗಾರಿ,18.80 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಡಕಚೇರಿ ಕಾಮಗಾರಿ, 17 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯವಿಲೇವರಿ ಘಟಕ ಕಾಮಗಾರಿ, 36 ಲಕ್ಷ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿ,738.13 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊನ್ನಾಳಿ ತಾಲೂಕಿನ ಕೆ.ಕೆ.ರಸ್ತೆಯಿಂದ ಕಂಚುಗಾರನಹಳ್ಳಿವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಸೇರಿದಂತೆ 446.41ಕೋಟಿ ವೆಚ್ಚದಲ್ಲಿ ಸಾಸ್ವೇಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಹಾಗೂ ಜಾಕ್‍ವೆಲ್ ಸಬ್‍ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 11 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ,ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಸಂದರ್ಭ 30 ಜನ ಬಗರ್‍ಹುಕ್ಕುಂ ಸಾಗುವಳಿದಾರರಿಗೆ ಮಂಜೂರಾತ್ರಿ ಪತ್ರ, 34 ಜನರಿಗೆ ಪಾಣಿ ಹಾಗೂ 398 ಜನರಿಗೆ ಮನೆ ನಿರ್ಮಾಣ ಮಾಡಲು ಆದೇಶಪತ್ರದ ಜೊತೆಗೆ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು.
ಬಳಿಕ ಬಸವನಹಳ್ಳಿ ಗ್ರಾಮದಲ್ಲಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ, 80 ಲಕ್ಷ ರೂಪಾಯಿ ವೆಚ್ಚದಲ್ಲಿ ಜಲಜೀವನ್ ಮೀಷನ್ ಕಾಮಗಾರಿ, 20 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾ.ಪಂ ಕಟ್ಟಡ, ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ದುರಸ್ಥಿ ಸೇರಿದಂತೆ ಒಟ್ಟು 1.84 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾಹಿತಿ ನೀಡಿದರು.
ಈ ಸಂದರ್ಭ ಎಸಿ ತಿಮ್ಮಣ್ಣ ಹುಲುಮನಿ, ತಹಶೀಲ್ದಾರ್ ರಶ್ಮಿ,ರೇಣುಕಾ, ಇಓ ರಾಮಾಬೋವಿ, ಸಿಪಿಐ ದೇವರಾಜ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾದೇವಿ ಸೇರಿದಂತೆ ತಾಲೂಕು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭೆ ಅಧ್ಯಕ್ಷ ರಂಗಪ್ಪ, ನಿಗಮದ ನಿರ್ದೇಶಕರಾದ ಮಾರುತಿನಾಯ್ಕ,ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ.ಶ್ರೀಧರ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗನಾಥ್ ಸೇರಿದಂತೆ ಗ್ರಾ.ಪಂ.ಸದಸ್ಯರಾದ ಬಾಬು, ಮಾಜಿತಾ.ಪಂ.ಸದಸ್ಯರಾದ ತಿಪ್ಪಣ್ಣ,ಮಹೇಶ್‍ಹುಡೇದ್,ಇಂಚರಮಂಜುನಾಥ್,ಎಲ್‍ಐಸಿ ಬಸವರಾಜ್ ಮತ್ತೀತರರಿದ್ದರು.

Leave a Reply

Your email address will not be published. Required fields are marked *