ಹೊನ್ನಾಳಿ : ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸಮಗ್ರ ಅಭಿವೃದ್ಧಿಯ ಮೂಲಮಂತ್ರ ಹೊಂದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಒಬ್ಬ ನಿಜವಾದ ಸಾಧಕ ಜನಪ್ರತಿನಿದಿಯಾಗಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಭಾನುವಾರ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಸಾಸ್ವೆಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕರಾದವರಿಗೆ ತಮ್ಮ ತಾಲೂಕಿನ ಬಗ್ಗೆ ಸಮಗ್ರ ಚಿತ್ರಣ ಹಾಗೂ ದೂರದೃಷ್ಟಿ ಇರಬೇಕು. ಇಂತಹ ಗುಣ ರೇಣುಕಾಚಾರ್ಯರಿಗೆ ಇದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುದಾನ ತಂದು ಅವುಗಳನ್ನು ಅನುಷ್ಠಾನ ಗೊಳಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕೊರೊನಾ ಸೋಂಕಿತರೊಂದಿಗೆ ಯಾವ ಶಾಸಕರು ಇರಲಿಲ್ಲ, ಆದರೆ ಶಾಸಕ ರೇಣುಕಾಚಾರ್ಯ ತಿಂಗಳುಗಟ್ಟಲೆ ಕೊರೊನಾ ಸೋಂಕಿತರೊಂದಿಗೆ ವಾಸ ಮಾಡಿ ಸೋಂಕಿತರ ಬೇಕುಬೇಡಗಳನ್ನು ನೀಗಿಸಿ ರಾಷ್ಟ್ರವ್ಯಾಪಿ ಹೆಸರು ಮಾಡಿದರು. ಇಂತಹ ಶಾಸಕರನ್ನು ಪುನಃ ಆಯ್ಕೆ ಮಾಡಬೇಕು ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಹಿಂದಿನ ಸಮಾರಂಭಕ್ಕೆ ನಾನು ಹೊನ್ನಾಳಿಗೆ ಬಂದಾಗ ನನ್ನ ಮೈಮೇಲೆ ಚಂಡು ಹೂ ಸುರಿದು ಪರಿಣಾಮ ನನಗೆ ಚರ್ಮದ ಅಲರ್ಜಿಯಾಗಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದೆ ಇನ್ನೇನು ಗುಣಮುಖವಾಖವಾಯಿತು ಎನ್ನುವ ಸಂದರ್ಭದಲ್ಲಿ ದಾವಣಗೆರೆ ನಗರದಲ್ಲಿ ಒಬ್ಬ ಅರ್ಚಕ ಹಣೆಗೆ ಕುಂಕುಮ ಇಟ್ಟ ಪರಿಣಾಮ ಹಣೆಯಲ್ಲಿ ಅಲರ್ಜಿ ಕಾಣಿಸಿಕೊಂಡಿತು. ಮುಂದಿನ ದಿನಗಳಲ್ಲಿ ಹೊನ್ನಾಳಿ ತಾಲೂಕಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಹಾರ, ತುರಾಯಿ ಹಾಕುವುದು ಮತ್ತು ಪಟಾಕಿ ಸಿಡಿಸುವುದನ್ನು ಮಾಡಬಾರದು ಎಂದ ಅವರು ಹಾರ, ತುರಾಯಿ ಬದಲಾಗಿ ನಮ್ಮ ಸರ್ಕಾರದ ಸಾಧನೆಗಳನ್ನು ತಾಲೂಕಿನ ಎಲ್ಲಾ ಮತದಾರರ ಮನೆಗಳಿಗೆ ತಲುಪಿಸುವ ಕೆಲಸ ಮಾಡಿ ಎಂದರು. ಅಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ರೇಣುಕಾಚಾರ್ಯರನ್ನು ಗೆಲ್ಲಿಸಿ ಅವರು ಸಚಿವರಾಗಿ ಹೆಚ್ಚಿನ ಕೆಲಸ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಾಸ್ವೆಹಳಿ ಹೋಬಳಿ ವ್ಯಾಪ್ತಿಯಲ್ಲಿ 14 ರೂ.ಕೋಟಿ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ. ನಮ್ಮ ಚಿಂತನೆ ಅವಳಿ ತಾಲೂಕುಗಳ ಸಮಗ್ರ ಅಭಿವೃದ್ಧಿ ಬಗ್ಗೆ ಇರುತ್ತದೆ, ಟೀಕೆ ಟಿಪ್ಪಣಿಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಹೇಳಿದರು.
ಈ ತಿಂಗಳ ಅಂತ್ಯದಲ್ಲಿ 1200 ರೂ.ಕೋಟಿ ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ಸಿಎಂ ಬಸವರಾಜ್‍ಬೊಮ್ಮಾಯಿ ಹಾಗೂ 10ಕ್ಕೂ ಹೆಚ್ಚು ಸಚಿವರನ್ನು ಕರೆಸಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಚುನಾವಣೆ ಸಮೀಪಸುತಿದ್ದಂತೆ ಕೆಲ ನಾಯಕರು ಮೊಸುಳೆ ಕಣ್ಣೀರು ಸುರಿಸಿ ಮತಯಾಚಿಸಲು ಬರುತ್ತಾರೆ. ಚುನುವಾಣೆ ಸಂದರ್ಭದಲ್ಲಿ ಅಂತಹ ನಾಯಕರು ಸೇವಕರಂತೆ ವರ್ತಿಸಿ ನಂತರ ಮಾಲಿಕರಾಗುತ್ತಾರೆ ಅಂತಹವರ ಬಣ್ಣ ಕಳೆದ ಮೂರು ಚುನಾವಣೆಯಲ್ಲಿ ಬಯಲಾಗಿದೆ. ಬಣ್ಣದ ಮಾತಿಗೆ ಹಾಗೂ ಇದು ನನ್ನ ಕೊನೆ ಚುನಾವಣೆ ಎನ್ನುವವರಿಗೆ ಸೊಪ್ಪು ಹಾಕದೆ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಾಸ್ತಾವಿಕ ಮಾತನಾಡಿ, ನನ್ನ ಕೆಲಸಗಳು ಮಾತನಾಡಬೇಕು ಎನ್ನುವ ಭಾವನೆ ಹೊಂದಿರುವ ಶಾಸಕ ರೇಣುಕಾಚಾರ್ಯರು ಸದಾ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾರೆ. ಕೋವಿಡ್‍ನಂತಹ ಕ್ಲಿಷ್ಟ ಸಮಯದಲ್ಲಿ ಕೊರೊನಾ ಸೋಂಕಿತರೊಂದಿಗೆ ಬದುಕಿದ್ದು ದೊಡ್ಡ ಸಾಧನೆ ಇಂತಹ ಶಾಸಕರನ್ನು ಕೈ ಬಿಡಬೇಡಿ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ರೇಣುಕಾಚಾರ್ಯರನ್ನು ಗೆಲ್ಲಿಸಿ ಎಂದು ಹೇಳಿದರು.
ಮಾಯಕೊಂಡ ಶಾಸಕ ಲಿಂಗಣ್ಣ ಮಾತನಾಡಿದರು. ಈ ಸಂದರ್ಭ ಜಿಪಂ ಸಿಒಇ ಡಾ.ಚನ್ನಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಹೊನ್ನಾಳಿ ಪುರಸಭೆ ಅಧ್ಯಕ್ಷ ಟಿ.ರಂಗನಾಥ್, ಗ್ರಾಪಂ ಅಧ್ಯಕ್ಷೆ ಸವಿತಾ, ಎಸ್‍ಪಿ ರಿಷ್ಯಂತ್, ಎಸಿ ತಿಮ್ಮಣ್ಣ ಹುಲ್ಲುಮನಿ, ಹೊನ್ನಾಳಿ, ನ್ಯಾಮತಿ ತಹಶೀಲ್ದಾರ್‍ರಾದ ರಶ್ಮಿ, ರೇಣುಕಾ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಕೆಎಸ್‍ಡಿಎಲ್ ಹಾಗೂ ಕಾಡಾ ನಿಗಮದ ನಿರ್ದೇಶಕರುಗಳಾದ ಮಾರುತಿನಾಯ್ಕ, ಅಜ್ಜಯ್ಯ, ಶಿವುಹುಡೇದ್, ಹನುಮಂತಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಇತರರು ಉಪಸ್ಥಿತರಿದ್ದರು. ತಾಪಂ ಇಒ ರಾಮಾಭೋವಿ ಸ್ವಾಗತಿಸಿದರು. ಗಣೇಶ ನಿರೂಪಿಸಿದರು.
ಇದಕ್ಕು ಮುನ್ನ ಸಚಿವರುಗಳನ್ನು, ಶಾಸಕ, ಸಂಸದರನ್ನು ಪೂರ್ಣಕುಂಭದೊಂದಿಗೆ ವೇದಿಕಗೆ ಕರೆತರಲಾಯಿತು.