ಸಾಸ್ವೇಹಳ್ಳಿ : ಹೊನ್ನಾಳಿ-ನ್ಯಾಮತಿ ಅಭಿವೃದ್ದಿಯಾಗ ಬೇಕೆಂದರೆ ರೇಣುಕಾಚಾರ್ಯ ಶಾಸಕರಾಗಿರ ಬೇಕು, ಅವರನ್ನು ಶಾಶ್ವತವಾಗಿ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೇ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಅತಿಹೆಚ್ಚು ಅನುದಾನ ತಂದು ತಾಲೂಕುಗಳನ್ನು ಅಭಿವೃದ್ದಿ ಮಾಡಿದ ಶಾಸಕರು ಯಾರಾದರು ಇದ್ದರೇ ಅದು ರೇಣುಕಾಚಾರ್ಯ ಮಾತ್ರ ಎಂದ ಸಂಸದರು, ಅವಳಿ ತಾಲೂಕುಗಳು ಮತ್ತಷ್ಟು ಅಭಿವೃದ್ದಿಯಾಗ ಬೇಕೆಂದರೆ ರೇಣುಕಾಚಾರ್ಯ ಅವರನ್ನು ಮತ್ತೋಮ್ಮೆ ಗೆಲ್ಲಿಸಿ ಎಂದರು.
ಜಿಲ್ಲಾಉಸ್ತುವಾರಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ರೇಣುಕಾಚಾರ್ಯ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗಲೇಲ್ಲಾ ಅವಳಿ ತಾಲೂಕಿನ ಅಭಿವೃದ್ದಿಗೆ ಅನುದಾನ ಕೋಡಿ ಎಂದು ಕೇಳುತ್ತಾರೆ. ಈಗಾಗಲೇ ಸಾಕಷ್ಟು ಅನುದಾನಗಳನ್ನು ತಂದು ಅವಳಿ ತಾಲೂಕುಗಳನ್ನು ರೇಣುಕಾಚಾರ್ಯ ಅಭಿವೃದ್ದಿ ಮಾಡಿದ್ದು, ರೇಣುಕಾಚಾರ್ಯ ಅವರನ್ನು ಮತ್ತೋಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ನಿಮ್ಮಲ್ಲಿ ಕೈಮುಗಿದು ಕೇಳುತ್ತೇನೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 18 ರೂ.ಕೋಟಿ ವೆಚ್ಚದಲ್ಲಿ ಬೆನಕನಹಳ್ಳಿ ಕೈಮರದಿಂದ ಹನಗವಾಡಿ ಗ್ರಾಮದವರೆಗೆ ರಸ್ತೆ, ಗ್ರಾಮದಲ್ಲಿ ಆಸ್ಪತ್ರೆ ಕಟ್ಟಡ, ಹೊಳೆ ಮೆಟ್ಟಿಲು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲಾಯಿತು ಎಂದು ಹೇಳಿದರು.
ಈ ಅವಧಿಯಲ್ಲಿ 2ಕೋಟಿ ರೂ.ವೆಚ್ಚದ ಬೆನಕನಹಳ್ಳಿ ತುಂಗಭದ್ರಾ ನದಿಗೆ ಹೊಳೆ ಮೆಟ್ಟಿಲು ಮತ್ತು ಕೂಡು ರಸ್ತೆ ಕಾಂಕ್ರೀಟ್ ಕಾಮಗಾರಿ ಶಂಕುಸ್ಥಾಪನೆ, 99ಲಕ್ಷ ರೂ. ವೆಚ್ಚದ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕದ ಶಂಕುಸ್ಥಾಪನೆ, 17 ಲಕ್ಷ ರೂ. ವೆಚ್ಚದ ಗ್ರಾಮದಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ, 10.5ಲಕ್ಷ ರೂ. ವೆಚ್ಚದ ಪ್ರಾಥಮಿಕ ಶಾಲಾ ಕೊಠಡಿಗೆ ಶಂಕುಸ್ಥಾಪನೆ, 6ಲಕ್ಷ ರೂ.ವೆಚ್ಚದ ಗ್ರಾಪಂ ಗ್ರಂಥಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 3.32 ಕೋಟಿ ರೂ, ಅನುದಾನ ವಿನಿಯೋಗಿಸಲಾಗಿದೆ ಎಂದು ಹೇಳಿದರು.
ಸುಳ್ಳು ಹೇಳುವ ಜಾಯಮಾನ ನನ್ನದಲ್ಲ ಎಂದ ಅವರು, ಸಾಮಾನ್ಯ ಜನರಿಗೆ ಯಾವ ಕೆಲಸ ನನ್ನಿಂದ ಆಗುತ್ತದೆ ಎಂದು ಹೇಳುತ್ತೇನೆಯೋ ಆ ಕೆಲಸವನ್ನು ನಾನು ಮಾಡಿ ಮುಂದೆ ಸಾಗುತ್ತೇನೆ. ಆಗದ ಕೆಲಸವನ್ನು ಆಗುತ್ತದೆ ಎಂದು ಸುಳ್ಳನ್ನು ಮಾತ್ರ ನಾನು ಹೇಳಿಲ್ಲ ಮುಂದೆಯೂ ಹೇಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಚುನಾವಣೆ ಬರುತ್ತಿದ್ದಂತೆ ಕೆಲವರು ಮೊಸಳೆ ಕಣ್ಣೀರು ಸುರಿಸುತ್ತಾ ನಿಮ್ಮ ಬಳಿ ಬರುತ್ತಾರೆ, ಯಾರು ಕೆಲಸ ಮಾಡುತ್ತಾರೋ ಅವರನ್ನು ಗೆಲ್ಲಿಸಿ ಎಂದ ರೇಣುಕಾಚಾರ್ಯ, ನಿಮ್ಮಗಳ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್‍ಪಿ ರಿಷ್ಯಂತ್, ಎಸಿ ತಿಮ್ಮಣ್ಣ ಹುಲ್ಲುಮನಿ,
ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಹೊನ್ನಾಳಿ, ನ್ಯಾಮತಿ ತಹಶೀಲ್ದಾರ್‍ರಾದ ರಶ್ಮಿ, ರೇಣುಕಾ, ಮುಖಂಡರಾದ ಬಂಗಾರಿ ಬಸಣ್ಣ, ಮಹೇಂದ್ರಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.