ಹೊನ್ನಾಳಿ:
ಮಾನ್ಸೂನ್ ಮಾರುತಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಮುಂಗಾರು ಮಳೆ ಕೂಡ ನಿರೀಕ್ಷಿತ ಮಟ್ಟದಲ್ಲಿ ಸುರಿಯುತ್ತಿಲ್ಲ. ಆದರೆ, ಕೆಲವೆಡೆಗಳಲ್ಲಿ ವಿಪರೀತ ಮಳೆ ಸುರಿಯುತ್ತಿರುವ ಕಾರಣ ಕಟಾವು ಮಾಡಿದ ಭತ್ತದ ಧಾನ್ಯಗಳು ಮಳೆ ನೀರಿನಲ್ಲಿ ನೆನೆದು ಮೊಳಕೆಯೊಡೆಯುತ್ತಿದ್ದು, ನಾಲ್ಕು ತಿಂಗಳುಗಳ ಕಾಲ ಕಷ್ಟಪಟ್ಟು ಭತ್ತ ಬೆಳೆದ ರೈತರು ದಿಕ್ಕುತೋಚದಂತಾಗಿದ್ದಾರೆ.
ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಕಟಾವು ಮಾಡಿದ್ದ ಭತ್ತದ ಧಾನ್ಯ ರಾಶಿ ನೀರುಪಾಲಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೇ ಭತ್ತದ ಧಾನ್ಯ ಮೊಳಕೆಯೊಡೆದಿದ್ದು, ರೈತರು ನಷ್ಟದ ಭೀತಿಯಲ್ಲಿದ್ದಾರೆ. ಮಳೆ ನೀರಿನಲ್ಲಿ ನೆನೆದ ಭತ್ತವನ್ನು ರೈತರು ಹರಸಾಹಸಪಟ್ಟು ಒಣಗಿಸುತ್ತಿದ್ದಾರೆ.
ದುಬಾರಿ ಬೆಲೆಯ ಭತ್ತದ ಬಿತ್ತನೆ ಬೀಜ, ರಸಗೊಬ್ಬರ ಇತರ ಪರಿಕರಗಳನ್ನು ಬಳಸಿ ಬೆಳೆದಿರುವ ರೈತರು ಮಳೆಯಿಂದಾಗಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಕೂಲಿ ಕಾರ್ಮಿಕರ ಕೊರತೆಯಿದ್ದು, ಸಕಾಲಕ್ಕೆ ಕೆಲಸ ನಿರ್ವಹಿಸಲು ಹೆಚ್ಚಿನ ಪ್ರಮಾಣದ ಕೂಲಿ ಹಣ ನೀಡಬೇಕಾಗಿದೆ. ಇಷ್ಟೆಲ್ಲವನ್ನೂ ನಿಭಾಯಿಸಿ ಬೆಳೆ ತೆಗೆದಿದ್ದು, ಇದೀಗ, ಅದೂ ನೀರುಪಾಲಾಗುತ್ತಿದೆ. ಬೆಳೆ ಬೆಳೆಯಲು ವ್ಯಯಿಸಿದ ಹಣ ವಾಪಸ್ ಬರುವ ನಿರೀಕ್ಷೆಯೂ ಇಲ್ಲ ಎನ್ನುತ್ತಾರೆ ಯಕ್ಕನಹಳ್ಳಿ ಗ್ರಾಮದ ರೈತ ಬಿ.ಎಂ. ರಾಮಾಂಜನೇಯ.
ಮೇ ತಿಂಗಳ ಎರಡು ಮತ್ತು ಮೂರನೇ ವಾರಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರ ಜಮೀನುಗಳನ್ನು ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಕೆಲವೆಡೆ ಪರಿಹಾರದ ಹಣವೂ ಈಗಾಗಲೇ ರೈತರ ಖಾತೆಗಳಿಗೆ ಜಮಾ ಆಗುತ್ತಿದೆ. ಆದರೆ, ಈಗ ಸುರಿಯುತ್ತಿರುವ ಮಳೆಯಿಂದಾಗಿ ಆಗುತ್ತಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಇತ್ತ ಗಮನಹರಿಸಲಿ ಎಂಬುದು ಅವರ ಒತ್ತಾಯವಾಗಿದೆ.