ಹುಣಸಘಟ್ಟ: ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶಕ್ತಿದೇವತೆ ಮುತ್ತು ಮಾರಿಯಮ್ಮ ದೇವಿಯ 6ನೇ ವರ್ಷದ ಕರಗ ಮಹೋತ್ಸವ ಶುಕ್ರವಾರ ಶನಿವಾರ ಎರಡು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿಅದ್ದೂರಿಯಾಗಿ ನಡೆಯಿತು.
ದೇವಿಯ ಕರಗ ಮಹೋತ್ಸವದ ಕಾರ್ಯಕ್ರಮವು ಗುರುವಾರದಿಂದ ಆರಂಭಗೊಂಡು ಅಂದು ಮುಂಜಾನೆ ದೇವಿಯ ಶೀಲಾ ಮೂರ್ತಿಗೆ ರುದ್ರಾಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ದೇವಿಗೆ ಅರಿಶಿಣ ಉಡಿಯಕ್ಕಿ ನೀಡುವ ಶಾಸ್ತ್ರ ನೆರವೇರಿತು.
ಶುಕ್ರವಾರ ಬೆಳಿಗ್ಗೆ ಶೃಂಗಾರಗೊಂಡ ಮುತ್ತು ಮಾರಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಗ್ರಾಮದ ಹೊರವಲಯದ ಚೌಡಮ್ಮನ ಸನ್ನಿಧಿಯಲ್ಲಿ ಗಂಗಾ ಪೂಜೆ ನೆರವೇರಿಸಿ, ಶೃಂಗಾರಗೊಂಡ ಕರಗ ಗೊಂಬೆಗಳನ್ನು ಹೊತ್ತು, ಪ್ರಶಾಂತ್ ಕುಟ್ಟಿ ಮನೋಜ್ ರವರು ಬಾಯಿಗೆ ದೊಡ್ಡದೊಡ್ಡ ತ್ರಿಶೂಲ ಧಾರಣೆ ಮಾಡಿಕೊಂಡು, ಸರಸ್ವತಿ ಚಿತ್ರ ವೆನಿಲಾ ರೋಜಾ ರವರು ಬೆಂಕಿಯ ಚಟ್ಟಿಗೆಗಳನ್ನು ಮಡಿಯಿಂದ ಹೊತ್ತು ಗ್ರಾಮದ ರಾಜ ಬೀದಿಯ ಉತ್ಸವ ನಡೆಯಿತು. ಮಧ್ಯಾಹ್ನ ದೇವಿಗೆ ಭಕ್ತರಿಂದ ಅಂಬಲಿ ಗಂಜಿ ಹೋಳಿಗೆ ನೈವೇದ್ಯ ನಡೆಯಿತು.
ಶನಿವಾರ ಬೆಳಿಗ್ಗೆ ಗ್ರಾಮದ ಭಕ್ತರಿಂದ ಸಂಭ್ರಮದ ಓಕಳಿ ಆಚರಣೆ ಸಾಮೂಹಿಕ ನೃತ್ಯ ನಂತರ ಅಮ್ಮನ ವಿಸರ್ಜನೆ ಕಾರ್ಯ ನಡೆಯಿತೆಂದು ದೇವಿಯ ಪ್ರಧಾನ ಅರ್ಚಕ ರವಿ ಸ್ವಾಮಿ ಹೇಳಿದರು. ಮುತ್ತು ಮಾರಿಯಮ್ಮ ಸೇವಾ ಸಮಿತಿಯ ಪದಾಧಿಕಾರಿಗಳಾದ ಪರಶುರಾಮ್, ಷಣ್ಮುಖ, ಶರಣ, ಬಾಲು, ಅಭಿ, ಮುರುಗೇಶ್, ಮಂಜುನಾಥ, ಗಣೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
.