ಹುಣಸಘಟ್ಟ: ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲನ್ನು ಅರಿಯಲು ನೆರವಾಗಿದೆ. ಶಿಕ್ಷಣ ಇಲಾಖೆಯ ಈ ಕ್ರಮ ಶ್ಲಾಘನೆಗೆ ಕಾರಣವಾಗಿದೆ ಎಂದು ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಪ್ರಾಚಾರ್ಯ ದೇವಿರಪ್ಪ ಹೇಳಿದರು.
ಹೋಬಳಿ ಸಾಸ್ವೆಹಳ್ಳಿಯ ಕರ್ನಾಟಕ ಪಬ್ಲಿಕ್ ( ಪ್ರೌಢಶಾಲಾ ವಿಭಾಗ ) ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಡಾ. ರಾಜೇಂದ್ರ ಪ್ರಸಾದ್ ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಆಯೋಜಿಸಿದ 2022-23 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ಪಾಲ್ಗೊಂಡು ವೀಕ್ಷಿಸಿ ಮಾತನಾಡಿದರು.
ಉಪಪ್ರಾಂಶುಪಾಲ ಮಲ್ಲಿಕಾ ಮತಗಟ್ಟೆ ಅಧಿಕಾರಿಯಾಗಿ ಪಾಲ್ಗೊಂಡು ಮಾತನಾಡಿ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸುವುದು ಮಕ್ಕಳಿಗೆ ವಿಶೇಷ ಅನುಭವ ನೀಡುತ್ತದೆ. ಪ್ರತಿ ಮಗು ಉಲ್ಲಾಸ ಹಾಗೂ ಕುತೂಹಲದಿಂದ ಮತದಾನ ಮಾಡುವುದನ್ನು ಹತ್ತಿರದಿಂದ ಕಂಡಿದ್ದೇನೆ. ಇಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳು ಕುತೂಹಲ ಹೆಚ್ಚಿ ಶಾಲಾ ದಾಖಲಾತಿ ಕೂಡ ನಿಚ್ಚಳವಾಗುತ್ತದೆ. ಸರ್ಕಾರಿ ಶಾಲೆಗಳ ಗುಣಮಟ್ಟಗಳಲ್ಲಿ ಉತ್ತಮವಾಗಿದ್ದು ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.
ನಮ್ಮ ಶಾಲೆಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ್ದು ಬಹಳ ಖುಷಿ ನೀಡಿತು. ಅಲ್ಲದೆ ಚುನಾವಣೆ ಹೇಗೆ ನಡೆಸುತ್ತಾರೆ ಎಂಬ ಕುತೂಹಲ ದೂರವಾಯಿತು. ನಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತದಾನ ಮಾಡಿದೆವು. ಶಿಕ್ಷಕರು ಮತದಾನದಲ್ಲಿ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು ಎನ್ನುತ್ತಾನೆ 10 ನೇ ತರಗತಿ ವಿದ್ಯಾರ್ಥಿ ಎಂಆರ್ ಪ್ರದೀಪ.
ಪ್ರೌಢಶಾಲಾ ಶಿಕ್ಷಕರಾದ ಕಾಶಿನಾಥ, ರಾಜೇಶ್ವರಿ, ವೀಣಾ ಗೌಡರ್, ಶಿವಕುಮಾರ್, ದತ್ತಾತ್ರೇಯ, ಸಂತೋಷ, ಚನ್ನಬಸಯ್ಯ, ಮಹೇಶ್, ವೇದಾವತಿ, ಸುಜಾತ, ಶ್ರೀನಿವಾಸ ಚುನಾವಣಾ ಕಾರ್ಯ ನಿರ್ವಹಿಸಿದರು.