ಹುಣಸಘಟ್ಟ: ಮಕ್ಕಳು ಈ ದೇಶದ ಆಸ್ತಿ ಆದರೆ ಆ ಮೊಗ್ಗುಗಳು ಅರಳುವ ಮೊದಲೇ ದುಡಿತದ ಬಡತನಕ್ಕೆ ಒಳಪಡಿಸುವ ದಾರುಣ ಸ್ಥಿತಿಯನ್ನು ಎಲ್ಲೆಡೆ ಕಾಣುತ್ತಿದ್ದೇವೆ ಎಂದು ಹೊನ್ನಾಳಿ ತಾಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಹೇಳಿದರು.
ಹೋಬಳಿ ಸಾಸ್ವೆಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಸಿಡಿಪಿಓ ಇಲಾಖೆ ಮತ್ತು ಕಾರ್ಮಿಕರ ಇಲಾಖೆ ಹೊನ್ನಾಳಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಿಗ್ಗೆ ನಡೆದ ರಾಷ್ಟ್ರೀಯ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು ಬಾಲಕಾರ್ಮಿಕತೆ ಯನ್ನು ಎಲ್ಲಾ ಸಮುದಾಯಗಳಲ್ಲಿಯೂ ಕಾಣಬಹುದಾಗಿದೆ ಆದರೆ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಸಮಸ್ಯೆಯ ತೀವ್ರತೆ ಅತ್ಯಧಿಕ. ಮಕ್ಕಳು ಒಂದು ದೇಶದ ಭವಿಷ್ಯ ಮಾತ್ರವಲ್ಲ ಇಡೀ ಮಾನವಕುಲದ ಭವಿಷ್ಯ ಎಂದು ಮನವರಿಕೆಯಾದರೆ ಮಾತ್ರ ಈ ಸಮಸ್ಯೆಯ ತೀವ್ರತೆ ಮತ್ತು ನಿರ್ಮೂಲನ ತೆಯ ಅಗತ್ಯ ಅದೆಷ್ಟು ಮುಖ್ಯ ಎಂಬುದರ ಅರಿವು ಉಂಟಾಗುತ್ತದೆ. ಆದುದರಿಂದಲೇ ವಿಶ್ವಮಟ್ಟದಲ್ಲಿ ಪ್ರಸ್ತುತವೂ ಈ ವಿಷಯವು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಮಾಕಾಂತ್ ಮಾತನಾಡಿ ಕಾನೂನಿನ ಅರಿವು ಇಲ್ಲ ಎಂದು ಸಮಾಜದಲ್ಲಿ ಯಾರೂ ವಂಚಿತರಾಗಬಾರದು ಅದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರ ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸಲು ಜನರ ಮನೆಯ ಬಾಗಿಲಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ಜನರು ಇದನ್ನು ಸದುಪಯೋಗ ಮಾಡಿಕೊಂಡು ಕಾನೂನು ಅರಿವು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲ ದೇವಿರಪ್ಪ ವಹಿಸಿ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ಉಮೇಶ್, ಉಪಪ್ರಾಂಶುಪಾಲ ಮಲ್ಲಿಕಾ ಸಿಡಿಪಿಒ ಮಹಾಂತೇಶ ಆರ್ ಪೂಜಾರ್, ಬಿ ಆರ್ ಸಿ ಅರುಣ್ ಕುಮಾರ್ ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.