ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅರ್ಹ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅನುದಾನ ರಹಿತ ಶಾಲೆಯಲ್ಲಿಯು ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಪರಿಶೀಲನೆ ನಡೆಸಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ತಿಳಿಸಿದರು.
ಅವರು (ಜೂ.14) ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪರಿಶೀಲನೆ ವೇಳೆ ತಿಳಿಸಿದರು. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವುದು ಸರ್ಕಾರ ಆದ್ಯತೆಯಾಗಿದೆ ಎಂದರು.
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಕರಾರುವಕ್ಕಾಗಿ ಸಂಗ್ರಹಿಸಬೇಕು. ಅಂಕಿ ಸಂಖ್ಯೆಗಳನ್ನು ವಿಶ್ಲೇಷಣೆ ಮಾಡುವುದು ಅಧಿಕಾರಿಗಳ ಕೆಲಸವಾಗಿದೆ. ಅನುದಾನ ರಹಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟಿದೆ, ಪಡೆಯುತ್ತಿರುವ ಶುಲ್ಕವೆಷ್ಟು ಇದರಲ್ಲಿ ಶಿಕ್ಷಕರಿಗೆ ನೀಡುತ್ತಿರುವ ವೇತನವೆಷು,್ಟ ನಿಯಮಾನುಸಾರ ಕನಿಷ್ಠ ವೇತನ ನೀಡಲಾಗುತ್ತಿದೆಯೇ, ಇಲ್ಲವೋ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ಡಿಡಿಪಿಐಗಳಿಗೆ ಅಂಕಿ ಅಂಶಗಳನ್ನು ನೀಡಲು ಸೂಚನೆ ನೀಡಿದರು.
ಪ್ರತಿ ವರ್ಷ ಪ್ರವೇಶ ಪಡೆಯುವ ಎಲ್ಲಾ ಮಕ್ಕಳ ಅಂಕಿ ಅಂಶಗಳನ್ನು ಸಂಗ್ರಹಿಸಿಕೊಂಡು ಎಷ್ಟು ವಿದ್ಯಾರ್ಥಿಗಳು ಕಳೆದ ವರ್ಷ ಒಂದನೇ ತರಗತಿಗೆ ಪ್ರವೇಶ ಪಡೆದಿದ್ದರು, ಇದರಲ್ಲಿ ಎರಡನೇ ತರಗತಿಗೆ ಈ ವರ್ಷ ಪ್ರವೇಶ ಪಡೆದವರೆಷ್ಟು, ಈ ರೀತಿ ಎಲ್ಲಾ ತರಗತಿಗಳ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿ ಅವಲೋಕನಾ ವರದಿಯನ್ನು ತಯಾರು ಮಾಡಬೇಕೆಂದು ತಿಳಿಸಿ ಈ ಬಗ್ಗೆ ಎಲ್ಲಾ ಅಧಿಕಾರಿಗಳು ಹೆಚ್ಚಿನ ಗಮನವಹಿಸಬೇಕೆಂದು ಸೂಚನೆ ನೀಡಿದರು.
ಎಲ್ಲಾ ಮಕ್ಕಳು ಶಾಲೆಗೆ ಬರಬೇಕು, ಯಾರು ಸಹ ಶಾಲೆಯಿಂದ ಹೊರಗುಳಿಯಬಾರದು. ಈಗ ತರಗತಿಯಿಂದ ತರಗತಿಗೆ ಮೂರ್ನಾಲ್ಕು ಸಾವಿರ ವ್ಯತ್ಯಾಸವನ್ನು ಕಾಣಲಾಗುತ್ತಿದೆ. ಈ ಮಕ್ಕಳು ಎಲ್ಲಿಗೆ ಹೋದರು ಎಂಬುದು ಬಹಳ ಮುಖ್ಯವಾಗಿ ವಿಶ್ಲೇಷಣೆ ಮಾಡಬೇಕು. ಹತ್ತನೇ ತರಗತಿಗೆ ಪ್ರವೇಶ ಪಡೆದವರಲ್ಲಿ ಪರೀಕ್ಷೆ ಶುಲ್ಕ ಕಟ್ಟುವಾಗ ಕಡಿಮೆಯಾಗಿದೆ ಮತ್ತು ಪರೀಕ್ಷೆ ತೆಗೆದುಕೊಂಡವರು ಪರೀಕ್ಷೆಗೆ ಹಾಜರಾಗದಿರುವುದು ಸಹ ಕಂಡು ಬಂದಿದೆ ಎಂದು ಚಿತ್ರದುರ್ಗ ಮತ್ತು ದಾವಣಗೆರೆ ಡಿಡಿಪಿಐಗಳಿಂದ ಮಾಹಿತಿ ಪಡೆದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ನೀಡಿದ ಅಂಕಿ ಅಂಶಗಳ ಬಗ್ಗೆ ಬೇಷರ ವ್ಯಕ್ತಪಡಿಸಿದ ಸಚಿವರು ಅಧಿಕಾರಿಗಳು ಸರಿಯಾದ ಅಂಕಿ ಅಂಶಗಳನ್ನೇ ಇಟ್ಟುಕೊಂಡಿರುವುದಿಲ್ಲ. ಅಂಕಿ ಅಂಶಗಳನ್ನಿಟ್ಟುಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಶಾಲೆಗಳು ಆರಂಭವಾಗಿ ಒಂದು ತಿಂಗಳಾಗುತ್ತಿದ್ದು ಆದರೂ ಸಹ ಪ್ರವೇಶ ಕುರಿತಂತ ಮಾಹಿತಿ ತಮ್ಮ ಬಳಿ ಅಪೂರ್ಣವಾಗಿದೆ. ಮುಂದೆ ಈಗಾಗದಂತೆ ಎಚ್ಚರವಹಿಸಲು ಸೂಚನೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪನಿರ್ದೇಶಕರು ಹೆಚ್ಚು ಪ್ರವಾಸ ಕೈಗೊಂಡು ಶಾಲೆಗಳ ಪರಿಶೀಲನೆ ನಡೆಸಿ ಅಲ್ಲಿನ ಮೂಲಭೂತ ಸೌಕರ್ಯಗಳ ಪರಿಶೀಲನೆ, ವಿದ್ಯಾರ್ಥಿಗಳ ಸಂಖ್ಯೆ, ಪಠ್ಯ ಪುಸ್ತಕ ಪೂರೈಕೆ ವಿವರ, ಹಾಜರಾತಿ, ಶಿಕ್ಷಕರ ಗೈರು ಸೇರಿದಂತೆ ತರಗತಿಯಲ್ಲಿನ ಪಾಠಗಳನ್ನು ವೀಕ್ಷಣೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರು ಹಾಗೂ ಡಾ; ಬಾಬುಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪ್ರೊ; ಎನ್.ಲಿಂಗಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಎ.ಚನ್ನಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಎ.ಆರ್.ರವಿ, ಜಂಟಿ ನಿರ್ದೇಶಕ ಹೆಚ್.ಮಂಜುನಾಥ, ದಾವಣಗೆರೆ ಡಿಡಿಪಿಐ ತಿಪ್ಪೇಶಪ್ಪ, ಚಿತ್ರದುರ್ಗ ಡಿಡಿಪಿಐ ರವಿಶಂಕರರೆಡ್ಡಿ ಸೇರಿದಂತೆ ಎರಡು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.