ನ್ಯಾಮತಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಲ್ಲಾ, ಅಭಿವೃದ್ದಿ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆಂದು ಸಿಎಂ ರಾಜಕೀಯಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಸುರಹೊನ್ನೆ ಗ್ರಾಮವನ್ನು 36 ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಹಾಕಿ ಅಭಿವೃದ್ದಿ ಪಡಿಸಲಾಗಿದೆ ಎಂದ ಶಾಸಕರು, ಇಡೀ ಗ್ರಾಮವನ್ನೇ ಧೂಳು ಮುಕ್ತ ಗ್ರಾಮವನ್ನಾಗಿ ಮಾಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಈ ಹಿಂದೆ ಸುರಹೊನ್ನೆ ಗ್ರಾಮಸ್ಥರು ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಇದನ್ನು ಮನಗಂಡು ತುಂಗಭದ್ರಾ ನದಿಯಿಂದ ಸುರಹೊನ್ನೆ ಗ್ರಾಮಕ್ಕೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.
ಸುರಹೊನ್ನೆ ಗ್ರಾಮವು ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಆಯ್ಕೆಯಾಗಿದ್ದು ಈಗಾಗಲೇ ಒಂದು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದ ಶಾಸಕರು ಸುರಹೊನ್ನೆ ಗ್ರಾಮವನ್ನು ಅವಳಿ ತಾಲೂಕಿನಲ್ಲೇ ಆದರ್ಶ ಗ್ರಾಮವನ್ನಾಗಿ ಮಾಡುತ್ತೇನೆ ಎಂದರು.
ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ : 9 ಲಕ್ಷ ರೂಪಾಯಿ ವೆಚ್ಚದಲ್ಲಿ ಸುರಹೊನ್ನೆ ಗ್ರಾಮದ ಶಾಂತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ ಗ್ರಾಮ ವಿಕಾಸ ಯೋಜನೆಯಡಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಕುಮಾರ್, ಮಾಜಿ ಗ್ರಾ.ಪಂ.ಅಧ್ಯಕ್ಷ ಹಾಲೇಶ್, ಸದಸ್ಯರಾದ ಸುಮಿತ್ರಮ್ಮ,ಮಲ್ಲಮ್ಮ,ಸಾವಿತ್ರಮ್ಮ,ರೇಖಮ್ಮ,ಈರಣ್ಯಪ್ಪ,ಭಾಗ್ಯಮ್ಮ ಸೇರಿದಂತೆ ಗ್ರಾಮದ ಮುಖಂಡರು ಮತ್ತಿತರರಿದ್ದರು.