ಹೊನ್ನಾಳಿ:
ಯೋಗ-ಧ್ಯಾನ-ಪ್ರಾಣಾಯಾಮಗಳಿಂದ ದೈಹಿಕ, ಮಾನಸಿಕ ಸದೃಢತೆ ಸಾಧ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ತಾಲೂಕು ಆಡಳಿತ, ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಮಂಗಳವಾರ ಹಮ್ಮಿಕೊಂಡ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನನ್ನು ಬಾಧಿಸುವ ಎಲ್ಲಾ ಸಮಸ್ಯೆಗಳಿಂದ ಯೋಗ ಮುಕ್ತಿಯನ್ನು ನೀಡುತ್ತದೆ. ಮನುಷ್ಯ ಸಂಬಂಧಗಳ ಸದೃಢತೆಗಾಗಿ ನಾವೆಲ್ಲರೂ ಬದುಕಿನಲ್ಲಿ ಯೋಗವನ್ನು ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಯೋಗ ನಮ್ಮ ದೇಶದ ಸ್ವತ್ತು ಎಂಬುದನ್ನು ಜಗತ್ತಿಗೆ ಪರಿಚಯಿಸಿದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು. ಯೋಗದ ಪ್ರಾಮುಖ್ಯತೆ, ಅದರಿಂದಾಗುವ ಆರೋಗ್ಯದ ಪ್ರಯೋಜನಗಳನ್ನು ತಿಳಿಸುವ ಮೂಲಕ ಜಗತ್ತೇ ಯೋಗಕ್ಕೆ ಮಾರುಹೋಗುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಹಿರೇಕಲ್ಮಠದ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚಂಚಲ ಮನಸ್ಸಿಗೆ ಸಂಸ್ಕಾರ ಬೇಕಾದರೆ ಯೋಗ-ಧ್ಯಾನ-ಪ್ರಾಣಾಯಾಮ ಅಗತ್ಯ. ತಮ್ಮ ಬದುಕನ್ನು ಹಸನು ಮಾಡಿಕೊಳ್ಳಲು ಜನತೆ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಸಾಮಾಜಿಕ ಜೀವನದಲ್ಲಿ ಯೋಗದ ಮಹತ್ವ, ಯೋಗದಿಂದ ಏನೇನು ಸಾಧ್ಯ ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟವರು ನಮ್ಮ ಋಷಿ-ಮುನಿಗಳು. ಇದನ್ನು ಜಗತ್ತಿನಾದ್ಯಂತ ಪಸರಿಸಿದವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದಲ್ಲಿ ಭಾರತಕ್ಕೆ ಗುರುವಿನ ಸ್ಥಾನ ಕಲ್ಪಿಸಿದೆ ಎಂದು ವಿವರಿಸಿದರು.
ಪುರಸಭಾಧ್ಯಕ್ಷ ಟಿ.ಎಚ್. ರಂಗನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಬೇಕು. ಆಗ ಅದರ ಪ್ರಯೋಜನ ನಮಗೆ ದೊರೆಯುತ್ತದೆ ಎಂದು ಹೇಳಿದರು.
ಹೊನ್ನಾಳಿಯಲ್ಲಿ ಸುಸಜ್ಜಿತ ಯೋಗ ಭವನವನ್ನು ನಿರ್ಮಿಸಬೇಕು ಎಂದು ಎಂ.ಪಿ. ಶಿವಶಂಕರಯ್ಯ ಶಾಸಕರಿಗೆ ಮನವಿ ಮಾಡಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಜ್ಯೋತಿ ಅಕ್ಕನವರು, ತಾಪಂ ಇಒ ರಾಮಭೋವಿ, ಡಾ. ಸಿದ್ಧೇಶ್ ಇತರರು ಮಾತನಾಡಿದರು.


ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಎಚ್.ಜೆ. ರಶ್ಮಿ ಹಾಲೇಶ್, ಪಿಎಸ್ಸೈ ಬಸವರಾಜ ಬಿರಾದಾರ, ಪುರಸಭಾ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಜಿ.ಎಸ್. ಅಜ್ಜಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್. ಉಮಾ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಾಧಿಕಾರಿ-ಯೋಗ ನೋಡಲ್ ಅಧಿಕಾರಿ ಡಾ. ಗಂಗಾಧರ ವರ್ಮಾ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಕುಮಾರ್, ಮುಖಂಡರಾದ ನೆಲಹೊನ್ನೆ ಎನ್.ಎಸ್. ಮಂಜುನಾಥ್, ಪತಂಜಲಿ ಯೋಗ ಸಮಿತಿಯ ಡಾ.ಎಚ್.ಸಿ. ಲಿಂಗರಾಜ್, ಪ್ರಕಾಶ್ ಹೆಬ್ಬಾರ್, ಶ್ರೀಕಾಂತ್, ರುದ್ರೇಶ್ ಇತರರು ಇದ್ದರು.

Leave a Reply

Your email address will not be published. Required fields are marked *