ಹೊನ್ನಾಳಿ ಜೂನ್ 21 ತಾಲೂಕು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿಯ ಅಧ್ಯಕ್ಷರಾದ ರಂಗಪ್ಪ ಕುಳಗಟ್ಟೆ ಇವರ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ತಾಲೂಕ ಅಧ್ಯಕ್ಷರಾದ ಕುಳಗಟ್ಟೆ ರಂಗಪ್ಪನವರು ನಂತರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರವ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಮತ್ತು ಸರ್ಕಾರಿ, ಸರ್ಕಾರಿ ಸಾಮ್ಯದ ಸಾರ್ವಜನಿಕ ಸಂಸ್ಥೆ/ಉದ್ದಿಮೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಎಲ್ಲಾ ನೇಮಕಾತಿಗಳಲ್ಲಿ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿ ಯವರಿಗೆ ಶೇ. 15 ರಿಂದ 17 ಕ್ಕೆ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 3 ರಿಂದ 7 ಕ್ಕೆ ಹೆಚ್ಚಿಸುವ ಸಂಬಂಧ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್‌ರವರ ವರದಿಯನ್ನು ಜಾರಿಗೊಳಿಸಲು ದಿನಾಂಕ: 20.5.2022 ರಂದು ತಾಲ್ಲೋಕು ಮಟ್ಟದಲ್ಲಿ ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಶಾಂತಿಯುತವಾಗಿ ಮೆರವಣಿಗೆ ನಡೆಸಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ತಾಲೂಕು ತಹಸೀಲ್ದಾರ್ ಮುಖಾಂತರ ಮನವಿ ನೀಡಲಾಗಿತ್ತು. ಆ ಮನವಿ ನೀಡಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ಇದೇ ಬೇಡಿಕೆಯನ್ನು ಮುಖ್ಯವಾಗಿಟ್ಟುಕೊಂಡು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ, ಹರಿಹರ ತಾಲ್ಲೂಕ್ ಇದರ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ದಿನಾಂಕ 10.2.2022 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಅದು ಇಂದಿಗೆ 131 ದಿನಗಳಾಗಿದೆ. ಆದರೆ ಮೀಸಲಾತಿ ಹೆಚ್ಚಿಸುವ ಸಂಬಂಧ ಯಾವುದೇ ಆದೇಶವನ್ನು ಸರ್ಕಾರ ಈವರೆಗೆ ಹೊರಡಿಸಿರುವುದಿಲ್ಲ. ಸರ್ಕಾರ ಸಂವಿಧಾನಿಕ ಮತ್ತು ನ್ಯಾಯಯುತವಾದ ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ದಿನಾಂಕ: 11.7.2022 ರಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಅಧ್ಯಕ್ಷರಾದ ಕುಳಗಟ್ಟೆ ರಂಗಪ್ಪ ಗೌರವ ಅಧ್ಯಕ್ಷರಾದ ಚಂದಪ್ಪ ಕಾರ್ಯದರ್ಶಿ ಪ್ರವೀಣ್ ಉಪಾಧ್ಯಕ್ಷರಾದ ಜಗದೀಶ್ ವಾಲ್ಮೀಕಿ ಯುವಪಡೆಯ ಪ್ರಭುಗೌಡ ರಮೇಶ್ ಹನುಮನಹಳ್ಳಿ ಕುಬೇರಪ್ಪ ನೇರಲಗುಂಡಿ ಇನ್ನು ಮುಂತಾದ ವಾಲ್ಮೀಕಿ ಸಮಾಜದ ಮುಖಂಡರುಗಳು ಸಹ ಭಾಗಿಯಾಗಿದ್ದರು.