ದಾವಣಗೆರೆ: ದೇಶದ ಭ್ರತೆಯ ಹಿತದೃಷ್ಟಿಯಿಂದ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರ್ಕಾರ ಈ ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಸಮಿತಿ ದಾವಣಗೆರೆಯಲ್ಲಿ ಸತ್ಯಾಗ್ರಹ ನಡೆಸಿದವು.
ಇಂದು ಬೆಳಿಗ್ಗೆ ನಗರದ ಎಸ್.ನಿಜಲಿಂಗಪ್ಪ ವೃತ್ತದ ಬಳಿಯಿರುವ ಅಮರ್ ಜವಾನ್ ಉದ್ಯಾನವನ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಅವರು ಕೇಂದ್ರ ಸರಕಾರ ಅಗ್ನಿಪಥ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶದ ಸೈನ್ಯದ ವ್ಯವಸ್ಥೆಯನ್ನೆ ನಾಶ ಮಾಡಲು ಹೊರಟಿದೆ ಎಂದು ದೂರಿದರು.
ದೇಶದ ಸೇವೆಗೆ ಸೇರಬೇಕು. ದೇಶ ಸೇವೆಯ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಮಾಡಬೇಕು ಎಂಬ ಲಕ್ಷಾಂತರ ಯುವಜನರ ಆಸೆಗೆ ಕೇಂದ್ರ ಸರಕಾರದ ನೂತನ ಯೋಜನೆ “ಅಗ್ನಿಪಥ” ತಣ್ಣಿರೇರಿಚಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸೈಯದ್ ಸೈಪುಲ್ಲಾ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಮುದೇಗೌಡ್ರು ಗಿರೀಶ್, ಕೆ.ಜಿ.ಶಿವಕುಮಾರ್, ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಸುಷ್ಮಾ ಪಾಟೀಲ್, ಎ.ನಾಗರಾಜ್, ಮಾತನಾಡಿ ದೇಶದ ಯುವಜನರು ಬಯಸುತ್ತಿರುವುದು ಖಾಯಂ ಉದ್ಯೋಗವೇ ಹೊರತು ತಾತ್ಕಾಲಿಕ ಉದ್ಯೋಗವಲ್ಲ. ಅಗ್ನಿಪಥ ಯೋಜನೆಯಿಂದ ಕೇವಲ ನಾಲ್ಕು ವರ್ಷಗಳಿಗೆ ಸೇನೆಯಲ್ಲಿ ತಾತ್ಕಾಲಿಕ ನೇಮಕಾತಿ ಮಾಡಿಕೊಂಡು ಆ ನಂತರ ಅವರನ್ನು ಅಲ್ಪ ಮೊತ್ತ ಹಾಗೂ ಒಂದು ಪ್ರಮಾಣ ಪತ್ರ ನೀಡಿ ಬಿಡುಗಡೆಗೊಳಿಸಿದರೆ ಅವರ ಮುಂದಿನ ಭವಿಷ್ಯವೇನು ಎಂದು ಪ್ರಶ್ನಿಸಿದರು.
ಸತ್ಯಾಗ್ರಹವನ್ನುದ್ದೇಶಿಸಿ ಶುಭಮಂಗಳ, ಮೈನುದ್ದೀನ್, ರಾಕೇಶ್, ಅಲಿರೆಹಮತ್, ಹರೀಶ್ ಕೆ.ಎಲ್.ಬಸಾಪುರ ಮಾತನಾಡಿ ಸೇನೆಗೆ ತಾತ್ಕಾಲಿಕ ನೇಮಕಾತಿ ವಿಧಾನವು ದೇಶದ ಆಂತರಿಕ ಮತ್ತು ಬಾಹ್ಯ ದೃಷ್ಠಿಯಿಂದ ಅತ್ಯಂತ ಅಪಾಯಕಾರಿಯಾಗಿದ್ದು ಕೂಡಲೇ ಈ ಅಗ್ನಿಪಥ ಯೋಜನೆಯನ್ನು ಕೈಬಿಟ್ಟು ಹಿಂದಿನಂತೆ ಸೇನೆಗೆ ಸಮರ್ಥ ಸೈನಿಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸತ್ಯಾಗ್ರಹದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಮನೂರು ಟಿ.ಬಸವರಾಜ್, ಸೈಯದ್ ಚಾರ್ಲಿ, ಮಂಜುನಾಥ್ ಇಟ್ಟಿಗುಡಿ, ಟಿ.ರಮೇಶ್, ಬಿ.ಎಂ.ಈಶ್ವರ್, ಕೊಡಪಾನ ದಾದಾಪೀರ್, ಡೋಲಿ ಚಂದ್ರು, ಲಾಲ್ ಆರೀಫ್, ಅಲೆಕ್ಸಾಂಡರ್, ನವೀನ್ ನಲವಡಿ, ಲಿಯಾಕತ್ ಅಲಿ, ಹರೀಶ್, ರಾಧಾಬಾಯಿ, ಹನುಮಂತರಾಜ್ ಪಾಪಣ್ಣಿ, ವಿರೇಶ್, ಮಹ್ಮದ್ ಜಿಕ್ರಿಯಾ, ರುದ್ರಮ್ಮ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.