ಜಿಲ್ಲೆಯಾದ್ಯಂತ ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ
(ಲದ್ದಿ ಹುಳು) ಬಾಧೆ ಕಾಣಿಸಿಕೊಂಡಿದ್ದು, ಹುಳುಗಳು ಎಲೆಗಳನ್ನು
ಕೆರೆದು ತಿನ್ನುವುದರಿಂದ ನೀಳವಾದ, ಚಿಂದಿಯಂತಾದ
ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಎಲೆ ಸುಳಿಯನ್ನು ತಿಂದು
ಹಾಳು ಮಾಡುತ್ತವೆ. ಆ ಸುಳಿಯಲ್ಲಿ ತೇವದಿಂದ ಕೂಡಿದ ಕಂದು
ಬಣ್ಣದ ಹಿಕ್ಕೆಗಳನ್ನು ಕಾಣಬಹುದಾಗಿದ್ದು, ರೈತರು ಮುಂಜಾಗೃತ
ಕ್ರಮ ವಹಿಸಬಹುದು.
ನಿರ್ವಹಣಾ ಕ್ರಮ: ಮೊಟ್ಟೆಗಳ ಗುಂಪು ಹಾಗೂ ಮೊದಲ
ಹಂತದ ಮರಿಗಳಿರುವ ಎಲೆಗಳನ್ನು ಕಿತ್ತು ನಾಶಪಡಿಸುವುದು.
ಹೊಲದಲ್ಲಿ ಅಲ್ಲಲ್ಲಿ ಕವಲೊಡೆದ ರೆಂಬೆಗಳನ್ನು ನೆಟ್ಟು
ಪಕ್ಷಿಗಳನ್ನು ಆಕರ್ಷಿಸುವುದು. ಮೊಟ್ಟೆಗಳ ಪರತಂತ್ರ
ಜೀವಿಯಾದ ಟ್ರೈಕೊಗ್ರಾಮ ಪ್ರೀಟಿಯೋಸಂನ್ನು ಎಕರೆಗೆ 50000
ಮೊಟ್ಟೆಗಳಂತೆ ನಿರ್ಧರಿತ ಅಂತರದಲ್ಲಿ ಬಿಡುವುದು. ಲದ್ದಿ
ಹುಳುವಿನಿಂದ ಶೇ. 10 ರಷ್ಟು ಹಾನಿಯಾಗಿದ್ದಲ್ಲಿ ಶೇ. 5ರ ಬೇವಿನ
ಕಷಾಯ (ಅಜಾಡಿರೆಕ್ಟಿನ್ 1500 ಪಿಪಿಎಂ)ವನ್ನು 5 ಮಿ.ಲೀ. ಪ್ರತಿ ಲೀಟರ್ ನೀರಿಗೆ
ಬೆರೆಸಿ ಸಿಂಪಡಿಸುವುದು. ಶೇ. 20 ರಷ್ಟು ಹಾನಿಯಾಗಿದ್ದಲ್ಲಿ 0.4 ಗ್ರಾಂ.
ಎಮಾಮೆಕ್ಟಿನ್ ಬೆನ್ಜೊಯೇಟ್ 5% ಎಸ್.ಜಿ. ಅಥವಾ 0.3 ಮಿ.ಲೀ. ಸ್ಪೈನೊಸಾಡ್
4 ಎಸ್.ಸಿ. ಅಥವಾ 2 ಗ್ರಾಂ. ಥೈಯೋಡಿಕಾರ್ಬ್ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ
ಸಿಂಪಡಿಸುವುದಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ
ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು
ಸಂಪರ್ಕಿಸಬಹುದು ಎಂದು ದಾವಣಗೆರೆ ಜಂಟಿ ಕೃಷಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.