ತಾಲೂಕಿನ ದೊಡ್ಡೆರೆಹಳ್ಳಿ ಗ್ರಾಮದ ರಮೇಶಪ್ಪ ಎಂಬುವವರಿಗೆ 2003 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾಗಿದ್ದು 1.20 ಗುಂಟೆ ಜಮೀನನ್ನು ಕಾನೂನು ಪ್ರಕಾರ ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡಲಿಕ್ಕೆ ತಹಶೀಲ್ದಾರ್ ಅವರು ಮಾಡಿದ್ದ ಆದೇಶವನ್ನು ಬುಧವಾರದಂದು ಸ್ಥಳೀಯ ಶಾಸಕರ ಮಾತು ಕಟ್ಟಿಕೊಂಡ ಇದೇ ತಹಸೀಲ್ದಾರ್ ಅವರು ಅರ್ಜಿದಾರರು ಅನುಭವದಲ್ಲಿಲ್ಲ ಎಂದು ಸುಳ್ಳು ಹೇಳಿ ಭೂಮಿ ಕೇಂದ್ರದಿಂದ ವಾಪಾಸು ತರಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದರು.
ತಹಸೀಲ್ದಾರ್ ರಶ್ಮಿ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ರಮೇಶಪ್ಪ ಎಂಬ ಫಲಾನುಭವಿಯು ಕಳೆದ 30 ವರ್ಷಗಳಿಂದ ಇಂದಿನವರೆಗೂ ಸ್ವಾಧೀನಾನುಭವದಲ್ಲಿರುತ್ತಾನೆ. ಆದರೆ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ತಹಸೀಲ್ದಾರ್ ಅವರು ಈ ತಪ್ಪು ಮಾಡಿದ್ದಾರೆ. ಆದ್ದರಿಂದ ಕೂಡಲೇ ಫಲಾನುಭವಿಯಿಂದ ಹಣ ಕಟ್ಟಿಸಿಕೊಂಡು ಖಾತೆ ಮತ್ತು ಪಹಣಿ ಮಾಡಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಅದೇ ರೀತಿ ತಾಲೂಕಿನ ಕುಂದೂರು ಗ್ರಾಮದಲ್ಲೂ ಸಹ ಶೇಖರಪ್ಪ ಎಂಬುವವರು ಕೂಡಾ ಕಳೆದ 30 ವರ್ಷಗಳಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿದ್ದು ಅವರು ಕೂಡಾ ಖಾತೆ ಮತ್ತು ಪಹಣಿ ಹೊಂದಿದ್ದು, ಅನುಭವದಲ್ಲಿರುತ್ತಾರೆ. ಈ ವಿಷಯದಲ್ಲೂ ಕೂಡಾ ತಹಸೀಲ್ದಾರ್ ಅವರು ರಾಜಕೀಯ ಪ್ರಭಾವ ಒತ್ತಡದಿಂದ ಭೋವಿ ಶೇಖರಪ್ಪ ಎಂಬುವವರನ್ನು ಪದೇ ಪದೇ ಕಚೇರಿಗೆ ಕರೆಸಿಕೊಂಡು ನೀನು, ಮಂಜೂರಾತಿಗಿಂತ ಹೆಚ್ಚು ಭೂಮಿಯಲ್ಲಿ ಅನುಭವದಲ್ಲಿದ್ದಿಯ, ಅದನ್ನು ಕೂಡಲೇ ಬಿಟ್ಟು ಕೊಡಬೇಕು ಎಂಬುದಾಗಿ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ ಅದನ್ನು ಬಿಡಿಸುವ ಅಧಿಕಾರ ತಹಸೀಲ್ದಾರ್‍ಇಲ್ಲ ಎಂದು ಡಿ.ಜಿ. ಶಾಂತನಗೌಡ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಲೆಕ್ಕಾಧಿಕಾರಿ ಅಮಾನತ್ತಿಗೆ ಆಗ್ರಹ : ತಾಲೂಕಿನ ಬೆನಕನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ತನ್ನ ಕಚೇರಿಯಲ್ಲಿ ಕುಳಿತು ಬರುವ ಎಲ್ಲಾ ಅರ್ಜಿದಾರರಿಗೆ ಪ್ರತಿಯೊಂದು ಅರ್ಜಿಗೂ 2 ಸಾವಿರ ಲಂಚ ಕೇಳಿ, ಮುಂಗಡವಾಗಿ 500 ಪಡೆದುಕೊಂಡಿರುವ ಬಗ್ಗೆ ವಿಡಿಯೋ ಇದ್ದು, ಅದು ಈಗಾಗಲೇ ವೈರಲ್ ಆಗಿದೆ. ಬೆನಕನಹಳ್ಳಿ ನನ್ನ ಸ್ವಗ್ರಾಮವಾಗಿದ್ದು, ಅಲ್ಲಿನ ಜನರ ದೂರು ಆಧರಿಸಿ ಕೂಡಲೇ ಅವರನ್ನು ಅಮಾನತ್ತಿಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಇನ್ನೊಂದು ವಾರದಲ್ಲಿ ಈ ಎರಡು ಪ್ರಕರಣಗಳನ್ನು ಸರಿಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು. ಬೆನಕನಹಳ್ಳಿ ಗ್ರಾಮಲೆಕ್ಕಾಧಿಕಾರಿ ಅವರು ಹಣ ಕೇಳಿದ್ದಾರೆ ಎನ್ನಲಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಗಮನಿಸಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕುಂಬಳೂರು ವಾಗೀಶ್, ಅರಕೆರೆ ಮಧುಗೌಡ, ಕ್ಯಾಸಿನಕೆರೆ ಶೇಖರಪ್ಪ, ಟೈಲರ್ ಬಸವರಾಜ್, ಕುಂಬಳೂರು ನಾರಾಯಣ್, ದಲಿತ ಮುಖಂಡ ಮಂಜಪ್ಪ, ಕೊಡತಾಳ್ ರುದ್ರೇಶ್, ದಿಡಗೂರು ರುದ್ರೇಶ್, ಜಿಲ್ಲಾ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎ.ರಂಜಿತ್, ವಿನಯ್, ಎಚ್.ಬಿ. ಪ್ರಶಾಂತ್ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *