ಹುಣಸಘಟ್ಟ :ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿ ಸಮುದಾಯಭವನದಲ್ಲಿ ಬಲರಾಮ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆ ಹಾಗೂ ಸಹರಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಮುಖ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾರ್ಯಕ್ರಮ ಉದ್ಘಾಟನೆಯನ್ನು ಹೊನ್ನಾಳಿ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ವೀರಭದ್ರಪ್ಪನವರು ನೆರವೇರಿಸಿ ಮಾತನಾಡಿ ರೈತ ಉತ್ಪಾದಕ ಸಂಸ್ಥೆ 1956 ರ ಕಂಪನಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತವೆ. ಷೇರುದಾರ ಸದಸ್ಯರೇ ರೈತ ಉತ್ಪಾದಕ ಸಂಸ್ಥೆ ಮುಖಂಡರಾಗಿ ಇರುವುದು ವಿಶೇಷ. ರೈತ ಉತ್ಪಾದಕ ಸಂಸ್ಥೆ ಕಾರ್ಪೊರೇಟ್ ಕಂಪನಿಯವರಂತೆಯೇ ಕಾರ್ಯ ನಿರ್ವಹಣೆ ಮಾಡುತ್ತವೆ. ರೈತ ಕಂಪನಿ ವೈವಾಟಿನ ಲಾಭವನ್ನು ಶೇರುದಾರರ ಸದಸ್ಯರಿಗೆ ಹಂಚಿಕೆ ಮಾಡಲು ಅವಕಾಶವಿದೆ. ಕೃಷಿ ಪರಿಕರ ಮಾರಾಟ, ಕೃಷಿ ಉತ್ಪನ್ನ ಸಂಸ್ಕರಣೆ, ಉತ್ಪನ್ನಗಳ ರಫ್ತು ಮತ್ತು ಆಮದು, ಪ್ರಕ್ರಿಯೆ ಕೈಗೊಳ್ಳಬಹುದು, ಬೀಜ ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ವಸ್ತು ಉಪಕರಣಗಳನ್ನು ನೇರವಾಗಿ ಆಯಾ ಕಂಪನಿಗಳಿಂದ ಖರೀದಿಸಿ ಮಾರಾಟ ಮಾಡುವ ಅಧಿಕಾರ ರೈತ ಉತ್ಪಾದಕರ ಸಂಸ್ಥೆಗಿದೆ ಎಂದರು.
ಸಾಸ್ವೆಹಳ್ಳಿ ಬಲರಾಮ ತೋಟಗಾರಿಕಾ ರೈತ ಉತ್ಪಾದಕರ ಸಂಸ್ಥೆಯು ಇದುವರೆಗೂ 530 ರೈತ ಶೇರುದಾರರನ್ನು ಹೊಂದಿದ್ದು ಕನಿಷ್ಠ ಒಂದು ಸಾವಿರ ರೈತ ಶೇರುದಾರರ ನೋಂದಾವಣೆ ಯಾಗದೆ ಹೊರತು ಯಾವುದೇ ಸರಕಾರದ ಸವಲತ್ತು ಲಭಿಸುವುದಿಲ್ಲ. ನೂತನ ಅಧ್ಯಕ್ಷರು ರೈತರ ಸಹಕಾರ ಪಡೆದು ಆದಷ್ಟು ಬೇಗ ಇನ್ನೂ 470 ರೈತರ ಶೇರು ಸಂಗ್ರಹ ಮಾಡುವಂತೆ ತಿಳಿಸಿದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಪಲ್ ರಾಜು ವಹಿಸಿದ್ದರು. ಹೊನ್ನಾಳಿ ಕೃಷಿ ಹಾಗೂ ತೋಟಗಾರಿಕೆ ತಜ್ಞ ನಾಗನಗೌಡ ಮಲ್ಕೋ ಜಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ರಮೇಶ್ ಗುರುರಾಜ್ ಮಠಪತಿ ಸಿಇಓ ಅರುಣ್, ನಿರ್ದೇಶಕರಾದ ಹರ್ಷ ಪಟೇಲ್ ಹಾಲಸ್ವಾಮಿ ಪಂಚಾಕ್ಷರಯ್ಯ ಬಸವನಗೌಡ ಯಶವಂತ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.