ಹೊನ್ನಾಳಿ:
ಸರಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕೋಟೆಮಲ್ಲೂರು ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಬಿ.ಜಿ. ಪರಮೇಶ್ವರಪ್ಪಗೌಡ್ರು ಹೇಳಿದರು.
ತಾಲೂಕಿನ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಎಸ್ಡಿಎಂಸಿ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಎಲ್ಲ ಸವಲತ್ತುಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ಗುಣಾತ್ಮಕ ಶಿಕ್ಷಣ ಲಭಿಸುತ್ತಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಖಾಸಗಿ ಶಾಲೆಗಳ ಮೋಹಕ್ಕೆ ಹಾಗೂ ಆಂಗ್ಲ ಮಾಧ್ಯಮದ ಶಿಕ್ಷಣದ ಆಕರ್ಷಣೆಗೆ ಒಳಗಾಗಿರುವ ಕೆಲವರಿಂದಾಗಿ ಸರಕಾರಿ ಶಾಲೆಗಳ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿದೆ. ಆದ್ದರಿಂದ, ಖಾಸಗಿ ಶಾಲೆಗಳ ಮೋಹ ತೊರೆದು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸರಕಾರಿ ಶಾಲೆಗಳ ಕೆಲ ಕೊರತೆಗಳನ್ನು ನೀಗಿಸುವ ಕೆಲಸವನ್ನು ಮಾಡಲು ಗ್ರಾಮಸ್ಥರು ಮುಂದಾಗಬೇಕು ಎಂದು ವಿವರಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಎಚ್.ಡಿ. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಎಸ್ಡಿಎಂಸಿ ಉಪಾಧ್ಯಕ್ಷ ರವಿಕುಮಾರ್, ಗ್ರಾಪಂ ಸದಸ್ಯರಾದ ಮಹೇಶ್ವರಪ್ಪ, ಕೆ.ಎನ್. ಹನುಮಂತಪ್ಪ, ಕಮಲಮ್ಮ ಹಾಲೇಶಪ್ಪಗೌಡ್ರು, ಎ.ಕೆ. ಅಣ್ಣಪ್ಪ, ಮುಖಂಡರಾದ ಬಿ.ಜಿ. ಶಿವಮೂರ್ತೆಪ್ಪಗೌಡ್ರು, ವಿಶ್ವನಾಥ್, ಬಸವರಾಜ್, ಮುಖ್ಯ ಶಿಕ್ಷಕ ಲಕ್ಷ್ಮಣ ಕುಂಸಿ, ಶಿಕ್ಷಕರಾದ ಪಿ.ಎಲ್. ಜನಾರ್ಧನ್, ಸಿ. ಮಂಜುಳಾ, ಲೀಲಾ ಕಾರಡಗಿ ಇತರರು ಇದ್ದರು.
ಕೋಟೆಮಲ್ಲೂರು ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಬಿ.ಜಿ. ಪರಮೇಶ್ವರಪ್ಪಗೌಡ್ರು ಶಾಲೆಯ 70 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಗ್ರಾಪಂ ಸದಸ್ಯರಾದ ಕೆ.ಎನ್. ಹನುಮಂತಪ್ಪ ಟೈ, ಬೆಲ್ಟ್ ಹಾಗೂ ಐಡಿ ಕಾರ್ಡ್‍ಗಳನ್ನು, ಕರಿಬಸಮ್ಮ ಭದ್ರಪ್ಪ ಶಾಲೆಯ ಧ್ವಜ ಸ್ತಂಭ ದುರಸ್ತಿಯನ್ನು, ಗ್ರಾಪಂ ಸದಸ್ಯರಾದ ಎ.ಕೆ. ಅಣ್ಣಪ್ಪ ಮತ್ತು ಕಮಲಮ್ಮ ಹಾಲೇಶಪ್ಪಗೌಡ್ರು ಕ್ರೀಡಾಕೂಟಕ್ಕೆ ಮಕ್ಕಳ ಟೀ ಶರ್ಟ್‍ಗಳನ್ನು, ಮುಖಂಡರಾದ ಬಿ.ಜಿ. ಶಿವಮೂರ್ತೆಪ್ಪಗೌಡ್ರು ಶಾಲಾ ಕೊಠಡಿಗೆ ಸಿಮೆಂಟ್ ಶೀಟ್‍ಗಳನ್ನು, ವಿಎಸ್ಸೆಸ್ಸೆನ್ ಅಧ್ಯಕ್ಷ ಕೆ.ಜಿ. ಶಿವನಗೌಡ ಮತ್ತು ನಿರ್ದೇಶಕ ಪಿ. ಚಂದ್ರಶೇಖರ್ ಶಾಲೆಗೆ ಕಬ್ಬಿಣದ ರ್ಯಾಕ್‍ಗಳನ್ನು ನೀಡಿದರು. ಕೋಟೆಮಲ್ಲೂರು ಗ್ರಾಪಂನ ಎಲ್ಲಾ ಸದಸ್ಯರು ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಕೆಲಸಕ್ಕೆ ಧನಸಹಾಯ ಒದಗಿಸಿದರು.

Leave a Reply

Your email address will not be published. Required fields are marked *