ಹೊನ್ನಾಳಿ : ಹೊನ್ನಾಳಿಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಮಾರಿಜಾತ್ರೆ ಪ್ರಸಕ್ತ ವರ್ಷದಲ್ಲಿ ಜುಲೈ 12 ರಿಂದ 14 ರವರೆಗೆ ಜರುಗಲಿದೆ ಎಂದು ಮಾರಿಕಾಂಬದೇವಿ ಜಾತ್ರೆ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಬಿ. ಸಿದ್ದಪ್ಪ ಹಾಗೂ ಎಚ್.ಎ. ಉಮಾಪತಿ ಹೇಳಿದರು.
ಶನಿವಾರ ಮಾರಿಗದ್ದುಗೆ ಬಳಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜುಲೈ 12 ರಂದು ಕುಂಬಾರಕೇರಿಯಲ್ಲಿರುವ ದುರ್ಗಮ್ಮ ದೇವಸ್ಥಾನದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು, ಅಲ್ಲಿ ಮಾರಿಕಾಂಬ ದೇವಿಯ ತವರುಮನೆ ನಾಡಿಗೇರ್ ಮನೆತನದವರಿಂದ ಮಾಂಗಲ್ಯಧಾರಣೆ ಮತ್ತು ಉಡಕ್ಕಿ ತರಲಾಗುವುದು. ಹಿರೇಮಠದ ಡಾ.ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುವ ಮಾಂಗಲ್ಯಧಾರಣೆ, ಉಡಕ್ಕಿ ಶಾಸ್ತ್ರ ಹಾಗೂ ಪೂಜೆ ಪುನಸ್ಕಾರಗಳನ್ನು ಮುಗಿಸಿದ ನಂತರ ಅಂದು ರಾತ್ರಿ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಾತ್ರಿ 9 ಗಂಟೆಗೆ ಮಾರಿಗದ್ದುಗೆ ಬಳಿ ತಂದು ಕೂರಿಸಲಾಗುವುದು ಎಂದು ತಿಳಿಸಿದರು.
ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಎಚ್.ಬಿ. ಶಿವಯೋಗಿ ಮಾತನಾಡಿ, ಜುಲೈ 14 ರಂದು ಮಧ್ಯಾಹ್ನ 1 ಗಂಟೆಗೆ ಮಾರಿಗದ್ದುಗೆಯ ಮಹಾಮಂಟಪದಿಂದ ದೇವಿಯ ಮೆರವಣಿಗೆ ಆರಂಭವಾಗಲಿದೆ. ಮಾರಿಗದ್ದುಗೆಯಿಂದ ಖಾಸಗಿ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ತುಮ್ಮಿನಕಟ್ಟೆ ರಸ್ತೆಯ ಮೂಲಕ ಕೆನರಾ ಬ್ಯಾಂಕ್ ಮಾರ್ಗವಾಗಿ, ದೊಡ್ಡಪೇಟೆ ನಂತರ ಎ.ಕೆ. ಕಾಲೋನಿ ಗೆ ಹೋಗಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ಎಚ್.ಡಿ. ವಿಜೇಂದ್ರಪ್ಪ ಮಾತನಾಡಿ, ಹೊನ್ನಾಳಿ ನಗರದ ಎಲ್ಲಾ ರಾಜಬೀದಿಗಳಲ್ಲಿ ಈ ಬಾರಿ ವಿಶೇಷವಾಗಿ ವಿದ್ಯುತ್ ಅಲಂಕಾರ ಮಾಡಿಸಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ 5 ಮಹಾದ್ವಾರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಮೆರವಣಿಗೆಯಲ್ಲಿ ಬೆಂಗಳೂರಿನ ಅಣ್ಣಮ್ಮ ದೇವಿ ಕಲಾವೃಂದದವರಿಂದ ತಮಟೆ ಬಾರಿಸುವವರನ್ನು ವಿಶೇಷವಾಗಿ ಕರೆಸಲಾಗಿದೆ ಎಂದು ಅವರು ತಿಳಿಸಿದರು. ಅದರ ಜೊತೆಗೆ ಡೊಳ್ಳು, ಕೀಲು ಕುದುರೆ ಹಾಗೂ ಗೊಂಬೆಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ ಎಂದು ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷರಾದ ಎಚ್.ಬಿ. ಗಿಡ್ಡಪ್ಪ ಹಾಗೂ ಎಚ್.ಎ. ರಾಜಪ್ಪ ಅವರು ಮಾತನಾಡಿ, ಮಾರಿಕಾಂಬ ಜಾತ್ರೆ ಸಂಬಂಧ ಜುಲೈ 13 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಮುಖಂಡ ಬಿ. ಸಿದ್ದಪ್ದಪ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯಬೇಕಿದ್ದ ಮಾರಿಜಾತ್ರೆಯು ಕೋವಿಡ್ ಮಹಾಮಾರಿಯಿಂದಾಗಿ ಈ ವರ್ಷ ಅಂದರೆ 5 ನೇ ವರ್ಷದಲ್ಲಿ ನಡೆಸಲಾಗುತ್ತಿದೆ. ಇನ್ನು ಮುಂದೆ ಪ್ರತಿ 5 ವರ್ಷಕ್ಕೊಮ್ಮೆ ಮಾರಿಜಾತ್ರೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಎಚ್.ಜೆ. ರಶ್ಮೀ ಹಾಗೂ ಪುರಸಭೆಯ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಮಾರಿಜಾತ್ರೆ ಪ್ರಯುಕ್ತ ಸಮಿತಿಯೊಂದಿಗೆ ಚರ್ಚಿಸಿ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುತ್ತಿದ್ದು ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಸಡಗರ ಸಂಭ್ರಮದಿಂದ ಮಾರಿಜಾತ್ರೆ ನಡೆಯುತ್ತಿರುವುದರಿಂದ ಇದೊಂದು ಊರಹಬ್ಬವಾಗಿ ಪರಿಣಮಿಸಿದ್ದು, ಭಕ್ತಾಧಿಗಳು ತಮ್ಮ ತನುಮನಧನವನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಎಚ್.ಬಿ. ಗಿಡ್ಡಪ್ಪ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಮಾಲಿಗೌಡ್ರು, ಉಪಾಧ್ಯಕ್ಷರಾದ ಬಣ್ಯಾಪ್ಪಾರ ಮಹೇಶ್ವರಪ್ಪ, ಜಂಬಿ ವೀರೇಶಪ್ಪ, ಯಜಮಾನರಾದ ದೊಡ್ಡಕೇರಿ ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಇಟ್ಟಿಗೆ ಬಸಣ್ಣ, ಎಚ್.ಬಿ. ಮೋಹನ್, ಅಡಿಕೆ ರವಿ, ಕೆ. ಪುಟ್ಟಪ್ಪ, ಬುದ್ದಿವಂತರ ರಮೇಶ್ ಸಣ್ಣಸಿದ್ದಪ್ಪ ಸೇರಿದಂತೆ ಹಲವರು ಮಾರಿಗದ್ದುಗೆ ಹಾಗೂ ಮಹಾಮಂಟಪವನ್ನು ಪರಿಶೀಲಿಸಿದರು.