ಎಸ್ಸೆಸ್ಸೆಂ ನಿವಾಸದಲ್ಲಿ ಕೇದಾರ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ
ಮುಂದಿನ ಆಷಾಢ ಮಾಸ ಮುನ್ನ ಮಲ್ಲಿಕಾರ್ಜುನ್ ವಿಜಯೋತ್ಸವ,
ನಂತರ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ
ಧರ್ಮಸಂಸತ್ ಆಶಯದಡಿ ಮಾತ್ರ ಪಂಚಪೀಠಗಳು ಒಂದಾಗಲು ಸಾಧ್ಯ: ಕೇದಾರ ಜಗದ್ಗುರುಗಳು
ದಾವಣಗೆರೆಯಲ್ಲಿಯೇ ಪಂಚಪೀಠಗಳು ಒಂದಾಗಿ ಪಾದಯಾತ್ರೆ ನಡೆಸಲು ಎಸ್ಸೆಸ್ ಭಿನ್ನ
ದಾವಣಗೆರೆ: ಪಂಚಪೀಠಗಳು ಒಂದಾಗಲು ಸಿದ್ದಾಂತ ಶಿಖಾಮಣಿಯಲ್ಲಿ ಹೇಳಿದಂತೆ ಧರ್ಮಸಂಸತ್ ಎಂಬ ಸಂವಿಧಾನವಿದ್ದು, ಅದರ ಆಶಯದಂತೆ ಪಂಚಪೀಠಗಳು ಒಂದಾಗಲಿವೆ ಎಂದು ಕೇದಾರ ಪಂಚಪೀಠದ ಜಗದ್ಗುರುಗಳಾದ ಶ್ರೀ ಭೀಮಾಶಂಕರಲಿಂಗ ಭಗವತ್ಪಾದರು ತಿಳಿಸಿದರು.
ದಾವಣಗೆರೆ ನಗರದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಸೋಮವಾರದಂದು ಡಾ|| ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ನೇರವೇರಿಸಿದ ನಂತರ ಭಕ್ತರಿಗೆ ಆಶೀರ್ವಚನ ನೀಡಿದರು.
ಪಂಚಪೀಠಗಳು ಒಂದಾಗಬೇಕೆಂಬ ಬೇಡಿಕೆ ಬಹಳದಿನದಿಂದಲೂ ಭಕ್ತರ ಆಶಯವಿದ್ದು, ಅದನ್ನು ಇಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪನವರು ವ್ಯಕ್ತಪಡಿಸಿದ್ದು, ಪಂಚಪೀಠಗಳು ಒಂದಾಗಲು ನಮ್ಮ ಅಭ್ಯಂತರವೇನೂ ಇಲ್ಲ. ಡಾ|| ಶಾಮನೂರು ಶಿವಶಂಕರಪ್ಪನವರೇ ಮುಂದಾಗಿ ಧರ್ಮಸಂಸತ್‍ನಂತೆ ಕಾರ್ಯಕ್ರಮ ನಡೆಸುವುದಾದರೆ ನಾವು ಈಗಲೇ ಸಿದ್ದ ಎಂದು ಮಾರ್ಮಿಕವಾಗಿ ನುಡಿದರು.
ಡಾ|| ಶಾಮನೂರು ಶಿವಶಂಕರಪ್ಪನವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ನಂತರ ಸಮಾಜ ಉನ್ನತ ಮಟ್ಟಕ್ಕೆ ತಲುಪಿದ್ದು, ಇದೀಗ ದಾವಣಗೆರೆಯಲ್ಲೂ ಸಹ ಕೇದಾರ ಮಾದರಿಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸುವ ಮೂಲಕ ದಕ್ಷಿಣ ಕೇದಾರವನ್ನಾಗಿ ದಾವಣಗೆರೆಯನ್ನು ಮಾಡಲಾಗುವುದು ಎಂದ ಅವರು ಶಾಮನೂರು ಶಿವಶಂಕರಪ್ಪನವರು ಈ ಮಂದಿರ ನಿರ್ಮಾಣಕ್ಕೆ 10ಲಕ್ಷ ರೂ.ಗಳನ್ನು ನೀಡಿರುವುದು ಸ್ವಾಗತಾರ್ಹವಾಗಿದ್ದು, ಮುಂದಿನ ದಿನಗಳಲ್ಲೂ ಅವರ ಸಹಕಾರ ಇರಲಿ ಎಂದರು.
ಮುಂದಿನ ಆಷಾಢ ಮಾಸದಲ್ಲಿ ಮಲ್ಲಿಕಾರ್ಜುನ್ ಅವರ ನಿವಾಸದಲ್ಲೇ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯನ್ನು ಹಮ್ಮಿಕೊಳ್ಳುವ ಸಂಕಲ್ಪ ಹೊಂದಿದ್ದು, ಅದಕ್ಕೂ ಮುನ್ನ ಮಲ್ಲಿಕಾರ್ಜುನ್ ಅವರ ವಿಜಯೋತ್ಸವ ನಡೆಯಲಿ ಎಂದು ಆಶಿಸಿದ ಜಗದ್ಗುರುಗಳು ಶಾಮನೂರು ಕುಟುಂಬವೂ ಹಿಮಾಲಯದೆತ್ತರಕ್ಕೆ ಬೆಳಗಲಿ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಭಕ್ತರ ಆಶಯದಂತೆ ಪಂಚಪೀಠಗಳು ಒಂದಾಗಿ ದಾವಣಗೆರೆಯಲ್ಲಿ ಪಾದಯಾತ್ರೆ ನಡೆಸಿ ಭಕ್ತಗಣಕ್ಕೆ ಸಂದೇಶವನ್ನು ರವಾನಿಸಿ ಎಂದು ಮನವಿ ಮಾಡಿ ಜಗದ್ಗುರುಗಳು ಕೇದಾರ ಮಾದರಿಯಲ್ಲಿ ದಾವಣಗೆರೆಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸಲು ಉದ್ದೇಶಿಸಿದ್ದು ಸ್ವಾಗತಾರ್ಹವಾಗಿದ್ದು, ಇದಕ್ಕೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿ ಪಂಚಪೀಠದ ಎಲ್ಲಾ ಮಠಗಳು ದಾವಣಗೆರೆಯಲ್ಲಿ ಅಸ್ತಿತ್ವವನ್ನು ಹೊಂದಿದ್ದು, ಇದೀಗ ಕೇದಾರ ಪಂಚಪೀಠವೂ ಸಹ ಭವ್ಯ ಮಂದಿರವನ್ನು ನಿರ್ಮಿಸುತ್ತಿದೆ ಎಂದರು.
ಕಣ್ವಕುಪ್ಪಿ ಗವಿಮಠದ ಡಾ|| ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶಾಮನೂರು ಕುಟುಂಬದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಮಕ್ಕಳು, ಶ್ರೀಮತಿ ಪ್ರೀತಿ ಬಕ್ಕೇಶ್ ಮತ್ತು ಮಕ್ಕಳು, ಶ್ರೀಮತಿ ರೇಖಾ ಗಣೇಶ್ ಮತ್ತು ಮಕ್ಕಳು, ಶ್ರೀಮತಿ ಜ್ಯೋತಿ ಮುರುಗೇಶ್ ಮತ್ತು ಮಕ್ಕಳು, ಸಂಬಂಧಿಕರು, ಸ್ನೇಹ ಬಳಗದವರು ಉಪಸ್ಥಿತರಿದ್ದರು.