ಶಿವಶರಣ ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಆದ್ಯ ವಚನಕಾರರಾಗಿ, ಪ್ರಮುಖವಾದ ವಚನಗಳ ಮುಖಾಂತರ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದ ಮಹನೀಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎ.ಚನ್ನಪ್ಪ ಹೇಳಿದರು
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು. ಬಸವಣ್ಣನವರು 12ನೇ ಶತಮಾನದಲ್ಲಿ ನೂರಾರು ಶರಣರನ್ನು ಒಂದು ಕಡೆ ಸೇರಿಸಿ ಕಾಯಕ ವೃತ್ತಿಯನ್ನು ಪ್ರಾರಂಭಿಸಿದರು. ಯಾರು ಕಾಯಕವನ್ನು ಮಾಡುತ್ತಾರೋ ಅಲ್ಲಿ ನಿರುದ್ಯೋಗದ ಸಮಸ್ಯೆ ಇರುವುದಿಲ್ಲ, ಪ್ರತಿಯೊಬ್ಬರೂ ಕೂಡ ಅವರವರ ಕಾಯಕದಲ್ಲಿ ತೊಡಗಿಕೊಂಡರೆ ನಿರುದ್ಯೋಗವನ್ನು ತೊಲಗಿಸಬಹುದು. ನಿಜಶರಣ ಹಡಪದ ಅಪ್ಪಣ್ಣ ಅವರು ರಚಿಸಿದ್ದ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ನಮ್ಮ ಬದುಕಿನ ಪ್ರೇರಣೆಗಳಿಗೆ ನಾವು ಸ್ಮರಣೆ ಮಾಡುವುದು ಅನಿವಾರ್ಯವಾಗಿದೆ. ಸಮಾಜದಲ್ಲಿ ಯಾರು ಶ್ರೇಷ್ಠರಲ್ಲ ಕನಿಷ್ಠರು ಅಲ್ಲ ನಾವೆಲ್ಲರೂ ಪರಮಾತ್ಮನ ಮಕ್ಕಳು ಎಲ್ಲರೂ ಸಮಾನವೆಂದು ಪ್ರತಿಬಿಂಬಿಸಿದರು ಬಸವಣ್ಣನವರು, ನಂಬಿಕೆ ಎಂದರೆ ಸತ್ಯ, ಸ್ನೇಹ, ಸಂಸಾರ, ಕುಟುಂಬ ಸಮಾಜದಲ್ಲಿ ನಂಬಿಕೆ ಇರಬೇಕು ಇಲ್ಲವೆಂದರೆ ಬೆಲೆ ಇರುವುವುದಿಲ್ಲ. ಎಲ್ಲರು ನಿಜಶರಣ ಹಡಪದ ಅಪ್ಪಣ್ಣನವರ ವಚನ ಸಾಹಿತ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜದ ಮುಖಂಡ ಶಿವಕುಮಾರ್ ಉಪನ್ಯಾಸ ನೀಡಿ, ಶರಣರಾದ ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೋಳಿಗೆಯ ಮಾರಯ್ಯ, ಡೋಹರ ಡಕ್ಕಯ್ಯ, ಮೇಧಾರ ಕೇತಯ್ಯ, ಸಮಗಾರ ಹರಳಯ್ಯ, ಸೊನ್ನಲಗದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು. ಈ ಸಮಾಜದಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ಹಡಪದ ಅವರ ಮುಖ ನೋಡಬಾರದು ಎಂಬ ತಪ್ಪು ಕಲ್ಪನೆ ದೂರ ಮಾಡಲು ಬಸವಣ್ಣನವರು ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ತಮ್ಮನ್ನು ನೋಡಲು ಬರುವವರೆಲ್ಲರೂ ಮೊದಲು ಅಪ್ಪಣ್ಣನವರನ್ನು ಭೇಟಿ ಮಾಡಿ ಬರುವಂತೆ ಮಾಡಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸಾಪುರ ಕಲಾ ಬಳಗದವರು ವಚನ ಗೀತೆಯನ್ನು ಹಾಡಿದರು.
ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾಕೌಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜದ ಅಧ್ಯಕ್ಷ ಶಶಿಧರ್ ಬಸಾಪುರ, ಮುಖಂಡರಾದ ಮರುಳಸಿದ್ದೇಶ್ವರ, ಶಿವಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *