ಹೊನ್ನಾಳಿ :ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಕಾಂಗ್ರೆಸ್‍ನವರು ಅಧಿಕಾರದ ಕನಸು ಕಾಣುತ್ತಿದ್ದಾರೆ ಆದರೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ 50 ರಿಂದ 60 ಸ್ಥಾನ ಮಾತ್ರ ಪಡೆಯುತ್ತದೆ. ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದ ಬಾಲ್‍ರಾಜ್ ಘಾಟ್‍ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಳಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಸಚಿವನಾಗಬೇಕೆಂದು ಆಸೆ ಇಟ್ಟುಕೊಂಡಿಲ್ಲಾ ಹಾಗಂತ ನಾನು ಸನ್ಯಾಸಿಯೂ ಅಲ್ಲಾ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರಾಮಾಣಿಕ ಸೇವಕನಾಗಿ ನಾನು ಕೆಲಸ ಮಾಡುತ್ತಿದ್ದೇನೆ ಎಂದ ಅವರು, ನಾನು ಅವಕಾಶವಾದಿ ಅಲ್ಲಾ ಪ್ರಾಮಾಣಿಕವಾಗಿ ಸೇವೆ ಮಾಡಿದರೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎಂದರು. ನಾನು ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದು, ನಾನು ಒಬ್ಬ ಆಶಾವಾದಿ ಕ್ಷೇತ್ರದ ಅಭಿವೃದ್ದಿಗಾಗಿ ನನ್ನ ಮನಸ್ಸು ಸದಾ ಮಿಡಿಯುತ್ತಿದೆ ಎಂದರು.
ಪಿಎಸ್‍ಐ ಅಕ್ರಮವನ್ನು ನಮ್ಮ ಸರ್ಕಾರ ನಿಸ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಅದನ್ನು ತೇಲಿಸಿ ಹೋಗಿದ್ದರು ಆದರೆ ನಮ್ಮ ಸಿಎಂ, ಗೃಹ ಸಚಿವರು ಮುಕ್ತವಾಗಿ ತನಿಖೆ ನಡೆಸುತ್ತಿದ್ದು ಸತ್ಯಾಂಶ ಹೊರ ಬರುತ್ತದೆ ಎಂದರು.
ಕಾಂಗ್ರೆಸ್‍ನವರ ಬಳಿ ದಾಖಲೆ ಇದ್ದರೆ ಅದನ್ನು ಬಿಡುಗಡೆ ಮಾಡಲಿ ಅದನ್ನು ಬಿಟ್ಟು ಅರಿವೆ ಹಾವು ಬಿಡುವುದು ಬೇಡ ಎಂದ ಅವರು, ನಮಗೆ ಅಧಿಕಾರವನ್ನು ಜನರು ಕೊಟ್ಟಿದ್ದು, ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ನೀಡುತ್ತಿದ್ದೇವೆ ಎಂದರು.
ನಮ್ಮಲ್ಲಿ ಯಡಿಯೂರಪ್ಪನವರ ಆಪ್ತ, ಬೊಮ್ಮಯಿ ಆಪ್ತ ಎಂದು ಯಾರೂ ಇಲ್ಲಾ ಎಲ್ಲರೂ ಬಿಜೆಪಿಯವರೆ ಎಲ್ಲರೂ ಒಟ್ಟಾಗಿ ಸಂಘಟನೆ ಮಾಡುತ್ತಿದ್ದೇವೆ. ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾಗಿ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಹಾಗೂ ಮಾರ್ಗದರ್ಶನ ಪಡೆಯಲು ಹೋಗಿರಬಹುದು ಅದರಲ್ಲಿ ತಪ್ಪೇನಿದೆ. ಮನೆಗೆ ಬಂದ ಅತಿಥಿಗಳು ನಮಗೆ ದೇವರ ಸಮನ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.