ಹೊನ್ನಾಳಿ : ಹೊನ್ನಾಳಿ ನಗರಕ್ಕೆ ನಗರ ಸಾರಿಗೆ ಸೌಲಭ್ಯ ಅತಿವಶ್ಯಕವಾಗಿ ಬೇಕಾಗಿದ್ದು, ನೂರಕ್ಕೆ ನೂರು ನಗರ ಸಾರಿಗೆ ಬಸ್‍ಗಳನ್ನು ಬಿಡಿಸುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಖಾಸಗಿ ಅನುದಾನಿತ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಬಸ್‍ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗೀ ಶುಕ್ರವಾರ ಶಾಸಕರ ನಿವಾಸಕ್ಕೆ ಆಗಮಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈಗಾಗಲೇ ಹಳ್ಳಿ ಹಳ್ಳಿಗಳಿಗೂ ಸರ್ಕಾರಿ ಬಸ್ ಸೌಲಭ್ಯಗಳನ್ನು ಕಲ್ಪಿಸಿದ್ದು ಇನ್ನೂ ಹತ್ತು ಬಸ್ಸುಗಳ ಅವಶ್ಯಕತೆ ಇದ್ದು ಅವುಗಳನ್ನು ಕೇಳಿದ್ದೇನೆಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರ ಸಾರಿಗೆ ಅವಶ್ಯಕತೆ ಇದ್ದು, ಈ ಬಗ್ಗೆ ಕೆಎಸ್‍ಆರ್‍ಟಿಸಿ ಎಂಡಿ ಅವರಿಗೆ ಪೋನ್ ಕರೆ ಮಾಡಿ ಮಾತನಾಡಿದ ಶಾಸಕರು, ಹೊನ್ನಾಳಿ ನಗರಕ್ಕೆ ಹಾಗೂ ಮಲದೇವರ ಕಟ್ಟೆಯಲ್ಲಿರುವ ಐಟಿಐ ಹಾಗೂ ಡಿಪ್ಲಮೋ ಕಾಲೇಜಿಗೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ನಗರ ಸಾರಿಗೆ ಸೌಲಭ್ಯದ ಅವಶ್ಯಕತೆ ಇದ್ದು,ಕೂಡಲೇ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಇದಕ್ಕೆ ಸ್ಪಂಧಿಸಿದ ಎಂಡಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು.
ಹೊನ್ನಾಳಿ ನಗರದಿಂದ ಕಾಲೇಜು,ಆಸ್ಪತ್ರೆ,ಕೋರ್ಟಗಳು ಎರಡು ಕಿಲೋನಷ್ಟು ದೂರವಿದ್ದು ನಗರ ಸಾರಿಗೆ ವ್ಯವಸ್ಥೆಯಾದರೆ ಅನುಕೂಲವಾಗಲಿದ್ದು, ನಾಲ್ಕು ಬಸ್ಸುಗಳಲ್ಲಿ ಎರಡು ಬಸ್ಸುಗಳನ್ನಾದರೂ ಬಿಡಿಸಲಾಗುವುದು ಎಂದರು.
ಖಾಸಗಿ ಕಾಲೇಜುಗಳ ಮೈದಾನ ದುರಸ್ತಿ, ಕಾಯಕಲ್ಪವನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೇ ಮಾಡಿಕೊಳ್ಳಬೇಕೆಂದ ಶಾಸಕರು, ಖಾಸಗಿ ಶಾಲಾ, ಕಾಲೇಜುಗಳ ನಿರ್ವಹಣೆ ಸಂಬಂಧಪಟ್ಟ ವಿದ್ಯಾಸಂಸ್ಥೆ ಹೊಣೆಯಾಗಿರುತ್ತದೆ ಎಂದರು.
ಇನ್ನು ರಸ್ತೆ ಕೇಳಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ರಸ್ತೆ ಮಾಡಿಸಿ ಕೊಡುವುದಾಗಿ ಬರವಸೆ ನೀಡಿದರು.
ಕೆಎಸ್‍ಡಿಎಲ್ ನಿರ್ದೇಶಕ ಶಿವು ಹುಡೇದ್, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ದಾವಣಗೆರೆ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಳದಪ್ಪ ಇದ್ದರು.

Leave a Reply

Your email address will not be published. Required fields are marked *