ಹುಣಸಘಟ್ಟ: ಸಾಸ್ವೆಹಳ್ಳಿ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಜಾಕ್ವೆಲ್ ಪಂಪ್ ಹೌಸ್ಗೆ ವಿದ್ಯುತ್ ಲೈನ್ ಕಾಮಗಾರಿಗೆ ಬೆಂಗಳೂರು ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಇಲ್ಲಿನ ಅಧಿಕಾರಿಗಳು ಕಾಮಗಾರಿ ಕೆಲಸವನ್ನು ನಿಲ್ಲಿಸದೆ ಕೆಲಸವನ್ನು ಮುಂದುವರಿಸುತ್ತಿದ್ದಾರೆ ಎಂದು ಬೀರಗೊಂಡನಹಳ್ಳಿ ಗ್ರಾಮದ ರೈತ ಮುಖಂಡ ಬಿವೈ ಪರಮೇಶ್ವರಪ್ಪ ಆರೋಪಿಸಿದರು.
ಸಾಸ್ವೆಹಳ್ಳಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಸ್ವೆಹಳ್ಳಿ ಏತ ನೀರಾವರಿ ಜಾಕ್ ವೇಲ್ ಪಂಪ್ ಹೌಸ್ ವಿದ್ಯುತ್ ಕಾಮಗಾರಿಗೆ ಬಿದರಗಡ್ಡೆ ಗ್ರಾಮದ ವಿದ್ಯುತ್ ಉಪ ಕೇಂದ್ರದಿಂದ 66/11 ಕೆವಿ ವಿದ್ಯುತ್ ಲೈನ್ ತರಲು ಸುಮಾರು 11ಕಿ. ಮೀ ದೂರವಾಗಲಿದ್ದು, ಈ ಮಾರ್ಗದ 8 ಹಳ್ಳಿಗಳ 256 ರೈತರ ಕುಟುಂಬಗಳಿಗೆ ಭೂಮಿ ವಂಚಿತ ವಾಗಲಿದೆ ಹಾಗೂ ಈ ಕಾಮಗಾರಿಯಿಂದ ಸರ್ಕಾರಕ್ಕೆ ಬಾರಿ ಹೊರೆಯಾಗಲಿದೆ. ಸಾಸ್ವೆಹಳ್ಳಿ ಯಿಂದ 3ಕಿ. ಮೀ ದೂರದಲ್ಲಿರುವ ಐನೂರು ವಿದ್ಯುತ್ ಉಪಕೇಂದ್ರದಿಂದಾಗಲಿ, 1.5ಕಿ. ಮೀ ದೂರದಲ್ಲಿರುವ 66 ಕೆವಿ ಲಿಂಗದಳ್ಳಿ ಮಾರ್ಗದ ಪವರ್ ಲೈನ್ ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ 256 ಸಣ್ಣ ಸಣ್ಣ ರೈತರ ಜಮೀನು ಉಳಿಸಬಹುದು ಎಂದರು.
ಈ ಭಾಗದ ರೈತರು ಅಂದಿನ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಳಿ ಕಾಮಗಾರಿ ಪೂರ್ವದಲ್ಲಿ ಚರ್ಚಿಸಿದ್ದರು ರೈತರ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸದೆ ಪೊಲೀಸರ ಇಟ್ಟುಕೊಂಡು ಕೆಲಸ ಮಾಡುವುದಾಗಿ ಆದೇಶ ನೀಡಿದರು. ರೈತರು ಡಿಸಿ ಅವರ ಆದೇಶ ವಿರೋಧಿಸಿ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ರೈತರೊಂದಿಗೆ ಅರ್ಜಿ ಸಲ್ಲಿಸಿದ್ದೆವು. ರೈತರ ಕಷ್ಟ ಆಲಿಸಿದ ಉಚ್ಚ ನ್ಯಾಯಾಲಯ ವಿದ್ಯುತ್ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿದೆ. ಡಿಸಿ ಅವರಿಗೆ ರೈತರ ಭೂಸ್ವಾಧೀನ ಮಾಡಿಕೊಳ್ಳದಂತೆ ಆದೇಶ ನೀಡಿದೆ. ಇಂದಿನ ಜಿಲ್ಲಾಧಿಕಾರಿಯವರಲ್ಲಿ ರೈತರ ಮನವಿ ಸಾಸ್ವೆಹಳ್ಳಿ ಏತ ನೀರಾವರಿ ಜಾಕ್ವೆಲ್ ಪಂಪ್ ಹೌಸ್ ಗೆ 1600 ಹೆಚ್ ಪಿ ಸಾಮರ್ಥ್ಯದ ವರ್ಷದಲ್ಲಿ ಕೇವಲ3 ರಿಂದ 4 ತಿಂಗಳು ನೀರ್ ಎತ್ತುವುದಕ್ಕೆ ಅದರಲ್ಲೂ ಮಳೆಗಾಲದಲ್ಲಿ ಮಾತ್ರ ಜಾಕ್ವೆಲ್ ಸಮೀಪದಲ್ಲಿಯೇ ಐನೂರು ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ರೈತರ ಭೂಮಿ ಉಳಿಸಿ ಕೊಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬೀರಗೊಂಡನಹಳ್ಳಿ, ಚಿಕ್ಕಬಾಸೂರು ಗ್ರಾಮದ ರೈತರಾದ ಧನಂಜಯ, ಮಂಜುನಾಥ, ಗಣೇಶ, ವೆಂಕಟೇಶ,ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಸುದ್ದಿ1: ಸಾಸ್ವೆಹಳ್ಳಿ ಏತ ನೀರಾವರಿ ವಿದ್ಯುತ್ ಕಾಮಗಾರಿಗೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಕಾಮಗಾರಿ ಕೆಲಸ ನಡೆಯುತ್ತಿರುವುದು.
ಫೋಟೋ ಸುದ್ದಿ 1ಎ : ಸಾಸ್ವೆಹಳ್ಳಿ ಏತ ನೀರಾವರಿ ವಿದ್ಯುತ್ ಕಾಮಗಾರಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ರೈತ ಪರಮೇಶ್ವರಪ್ಪ ಆರೋಪ ಮಾಡುತ್ತಿರುವುದು.