ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದವತಿಯಿಂದ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಮನವಿ ಸ್ವೀಕರಿಸಿದರು.
ಹೊನ್ನಾಳಿ,27: ತಾಲ್ಲೂಕಿನ ದಿಡಗೂರು ಹಾಗೂ ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪ ಮತ್ತು ತುಗ್ಗಲಹಳ್ಳಿ ಗ್ರಾಮಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ದಲಿತ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವಂತಹ ಕೆಲಸಕ್ಕೆ ಕೈ ಹಾಕಿರುವ ತಹಶೀಲ್ದಾರ್ ಎಚ್.ಜೆ. ರಶ್ಮೀ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಹಾಗೂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಯಿತು.
ದಿಡಗೂರು ಗ್ರಾಮದ ಸ.ನಂ 22 ರಲ್ಲಿ ಹಾಗೂ ಕೆಂಚಿಕೊಪ್ಪ, ತುಗ್ಗಲಹಳ್ಳಿ ಸರ್ವೇ ನಂಬರ್ 29, 30 ರಲ್ಲಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ದಲಿತ ಸಾಗುವಳಿದಾರರನ್ನು ತಹಶೀಲ್ದಾರ್ ರಶ್ಮೀ ಅವರು ಯಾರದ್ದೋ ಚಿತಾವಣೆಯಿಂದ ಒಕ್ಕೆಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರವಾಗಿ ಖಂಡಿಸಿದರು. ಈ ಸಾಗುವಳಿದಾರರು ಪಕ್ಕ ದಲಿತರಾಗಿದ್ದು, ಅವರು ಉಳುಮೆ ಮಾಡುತ್ತಿರುವ ಜಮೀನುಗಳಿಗೆ ಹೋಗಿ ಉಳುಮೆ ಮಾಡದಂತೆ ತಡೆದು ಅವರ ಮೇಲೆ ಸೆಕ್ಷನ್ 107 ಅಡಿ ದೂರುಗಳನ್ನು ದಾಖಲಿಸಿ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ತಹಶೀಲ್ದಾರ್ ಗಳು ಉತ್ತಮ ಸೇವೆ ಸಲ್ಲಿಸಿ ಹೋಗಿದ್ದಾರೆ. ಆದರೆ ಈಗಿನ ತಹಶೀಲ್ದಾರ್ ರಶ್ಮೀ ಅವರು ದಲಿತ ಸಾಗುವಳಿದಾರರನ್ನು ತಾವೊಬ್ಬ ಅಧಿಕಾರಿ ಎಂಬುದನ್ನು ಮರೆತು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಆದ್ದರಿಂದ ಕೂಡಲೇ ಅವರ ಮೇಲೆ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಬೇಕು. ಹಾಗೂ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು, ಹಾಗೂ ಸಾಗುವಳಿದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಮೈಲಮ್ಮ ಕೋಂ ನರಸಪ್ಪ ಹೊಳೆಮಾದಾಪುರ ಸ ನಂ 73/1 ರಲ್ಲಿ ಹಾಗೂ ಚೌಡಮ್ಮ ಕಜ್ಜಿ ಅಣ್ಣಪ್ಪ ಚೀಲಾಪುರ ಸ. ನಂ 4/3 ರಲ್ಲಿ ಈ ಇಬ್ಬರಿಗೂ 2003 ರಲ್ಲಿ ಸಾಗುವಳಿ ಚೀಟಿ ನೀಡಿದ್ದು, ಇಲ್ಲಿಯವರೆಗೂ ಖಾತೆ ಮಾಡಿಕೊಟ್ಟಿರುವುದಿಲ್ಲ, ಆದ್ದರಿಂದ ಅವರಿಗೆ ಖಾತೆ ಮಾಡಿ ಪಹಣಿ ನೀಡಬೇಕು ಎಂದು ಆಗ್ರಹಿಸಿದರು.
ಕುಂದೂರು ಗ್ರಾಮದ ಸ.ನಂ 33 ಮತ್ತು 26, 27 ರಲ್ಲಿ ಸಾಗುವಳಿ ಪತ್ರ ಮತ್ತು ಪಹಣಿ, ಮ್ಯೂಟೆಷನ್ ಆಗಿದ್ದರೂ ಸಹ ಉಳುಮೆ ಮಾಡಲು ತೊಂದರೆ ಕೊಡುವುದನ್ನು ನಿಲ್ಲಿಸಬೇಕು, ಹೊನ್ನಾಳಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಬೇಕು ಮತ್ತು ವೃತ್ತವನ್ನು ನಿರ್ಮಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಸಿದ್ದೇಶ್, ರಾಜ್ಯ ಯುವ ಕಾಂಗ್ರೆಸ್ ವಕ್ತಾರ ದರ್ಶನ್ ಬಳ್ಳೇಶ್ವರ್, ರೈತಮುಖಂಡ ಷಣ್ಮುಖಪ್ಪ ಬಳ್ಳೇಶ್ವರ್ ಸೇರಿದಂತೆ ಹಲವರು ಮಾತನಾಡಿದರು.
ದಸಂಸ ಮುಖಂಡ ರಾಜು ಗೊಲ್ಲರಹಳ್ಳಿ, ಎರೇಚಿಕ್ಕನಹಳ್ಳಿ ಶಿವಪ್ರಸನ್ನ ಸೇರಿದಂತೆ ನೂರಾರು ದಲಿತರು ಹಾಜರಿದ್ದರು.